ಗುರುತು, ಪರಿಚಯ ಇಲ್ಲದವರಿಗೆ ಟಿಕೆಟ್ ಬೇಡ

ಗುರುತು, ಪರಿಚಯ ಇಲ್ಲದವರಿಗೆ ಟಿಕೆಟ್ ಬೇಡ

ಸಚಿವ ಎಸ್ಸೆಸ್ಸೆಂ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಹೈಕಮಾಂಡ್ ಕೂಡಾ ಅದೇ ಚಿಂತನೆಯಲ್ಲಿದೆ. ಅವರು ಅಭ್ಯರ್ಥಿಯಾದರೆ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ.

– ಹೆಚ್.ಬಿ. ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು

ದಾವಣಗೆರೆ, ಅ.7- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಹೈಕಮಾಂಡ್ ಕೂಡಾ ಅದೇ ಚಿಂತನೆಯಲ್ಲಿದೆ. ಅವರು ಅಭ್ಯರ್ಥಿಯಾದರೆ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಸ್ಪರ್ಧೆ ಮಾಡದೇ ಇದ್ದಲ್ಲಿ ಕಳೆದ ಬಾರಿ ಸೋಲು ಕಂಡಿದ್ದ ನಾನೇ ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಖಿಯಾಗಿದ್ದೇನೆ ಎಂದು ಹೇಳಿದರು.

ಪಕ್ಷಕ್ಕಾಗಿ ದುಡಿದವರು ಬಹಳ ಜನರಿದ್ದಾರೆ. ಆದರೆ ಕೆಲವರು ಹಣ ಬಲವಿದೆ ಎನ್ನುವ ಕಾರಣಕ್ಕೆ ತಾವೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಪೋಸ್ಟರ್, ಫ್ಲೆಕ್ಸ್ ಹಾಕಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನಿದೆ? ಎಂದು ಮಂಜಪ್ಪ ಪ್ರಶ್ನಿಸಿದರು.

ಗುರುತು, ಪರಿಚಯ ಇಲ್ಲದ ಕೆಲವರು ಬೆಂಗಳೂರು, ಮಂಗಳೂರಿನಿಂದ ಬಂದು, ಪಕ್ಷದ ಕೇಂದ್ರ, ರಾಜ್ಯ ನಾಯಕರ ಆಶೀರ್ವಾದದಿಂದ ಟಿಕೆಟ್ ನನಗೇ ಸಿಗಲಿದೆ ಎಂದು ಹೇಳಿಕೊಂಡು, ಅಲ್ಲಲ್ಲಿ ಸಭೆಗಳನ್ನು ಮಾಡಿ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ದೂರಿದ ಅವರು, ಪಕ್ಷಕ್ಕೆ ದುಡಿದ ಸ್ಥಳೀಯರಿಗೆ ಮುಂಬರುವ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದರು.

ಪಕ್ಷಕ್ಕೆ ತತ್ವ, ಸಿದ್ಧಾಂತವಿದೆ. ಜಿಲ್ಲೆಯ ನಾಯಕರು, ಮುಖಂಡರು, ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯ ಪಡೆದು, ಅಭ್ಯರ್ಥಿಯ ಹೆಸರು ಘೋಷಣೆ ಮಾಡುವ ಪರಿಪಾಠವಿದೆ. ಇದನ್ನು ತಿಳಿಯದ ಕೆಲವು ವ್ಯಕ್ತಿಗಳು ಹೈಕಮಾಂಡ್‌ನಿಂದ ಟಿಕೆಟ್ ತರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಇದಕ್ಕೆ ಪ್ರೋತ್ಸಾಹಿಸಿದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಚಮನ್ ಸಾಬ್, ದಿನೇಶ ಕೆ. ಶೆಟ್ಟಿ, ಮುದೇಗೌಡ್ರ ಗಿರೀಶ್, ಕೆ.ಜಿ. ಶಿವಕುಮಾರ್, ಕಲ್ಲೇಶ್, ರಾಜೇಶ್ವರಿ, ಶುಭಮಂಗಳ, ದಾಕ್ಷಾಯಣಮ್ಮ, ಸಂತೋಷ್ ದೊಡ್ಮನಿ, ರಾಘವೇಂದ್ರಗೌಡ, ಎ. ಅಬ್ದುಲ್ ಜಬ್ಬಾರ್ ಇದ್ದರು.

error: Content is protected !!