ದಾವಣಗೆರೆ, ಅ.8-ಕೇಂದ್ರ ಸರ್ಕಾರದಲ್ಲಿರುವವರನ್ನು ಭಯೋತ್ಪಾದಕರ ಹಿಂಬಾಲಕರು ಎಂದು ಅಸಂವಿಧಾನಿಕ ಪದ ಬಳಸಿ ತುಚ್ಛವಾಗಿ ಮಾತನಾಡಿರುವ ಡಿ.ಬಸವರಾಜ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಕಾನೂನು ಪ್ರಕೋಷ್ಟದಿಂದ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಿ. ಬಸವರಾಜ್ ಅವರು, ಅಂದು ಮಹಾತ್ಮ ಗಾಂಧೀಜಿ ಅವರನ್ನು ಅಮಾನುಷವಾಗಿ ಕೊಲೆಗೈದ ದೇಶದ ಮೊದಲ ಭಯೋತ್ಪಾದಕ, ನರ ಹಂತಕ ನಾಥೂರಾಮ್ ಗೋಡ್ಸೆ ಹಿಂಬಾಲಕರ ಕೈಯ್ಯಲ್ಲಿ ದೇಶದ ಆಡಳಿತವಿದೆ ಎಂದು ಪರೋಕ್ಷವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಅವಮಾನಿಸಿದ್ದಾರೆ.
ಈ ರೀತಿ ಪದ ಬಳಸಿರುವುದು ಅಸಂವಿಧಾನಿಕವಾಗಿದ್ದು, ಪ್ರಧಾನಿ ಹಾಗೂ ಭಾರತ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಬಸವರಾಜ್ ಹಾಗೂ ಆ ಸಮಯದಲ್ಲಿ ಹಾಜರಿದ್ದ ಇತರರ ವಿರುದ್ಧ ಐಸಿಸಿ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹೆಚ್. ದಿವಾಕರ್, ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರು ಹಾಗೂ ವಕೀಲರ ಸಹಕಾರ ಸಂಘದ ನಿರ್ದೇಶಕರೂ ಆದ ಎ. ಸಿ. ರಾಘವೇಂದ್ರ, ಜಿಲ್ಲಾ ಸಮಿತಿ ಸದಸ್ಯ ಹಾಗೂ ವಕೀಲರ ಸಹಕಾರ ಸಂಘದ ನಿರ್ದೇಶಕ ಎ. ಕೆ. ಹಾಲಪ್ಪ, ಕಾನೂನು ಪ್ರಕೋಷ್ಟದ ಉತ್ತರ ವಿಧಾನ ಸಭಾ ಕ್ಷೇತ್ರದ ಸಂಚಾಲಕ ಪಿ. ವಿ. ಶಿವಕುಮಾರ್ ಹಾಗೂ ನೋಟರಿ ನೀಲಕಂಠಯ್ಯ ಹಾಜರಿದ್ದರು.