ಹೊನ್ನಾಳಿ, ಅ. 6- ಶಿವಮೊಗ್ಗದಲ್ಲಿ ಈದ್ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ಅಶಾಂತಿ ಮೂಡಿಸಿರುವ ಆರೋಪಿಗಳನ್ನು ಬಂಧಿಸಿದರೆ ಸಾಲದು, ಅವರನ್ನು ಎನ್ಕೌಂಟರ್ ಮಾಡಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜೀವಕ್ಕೆ ಬೆದರಿಸಿದ್ದು, ಅಲ್ಲದೆ ಶಿವಮೊಗ್ಗ ಎಸ್ಪಿ ಅವರ ಮೇಲೆ ದಾಳಿಗೆ ಯುತ್ನಿಸಿದ್ದ ದ್ರೋಹಿಗಳಿಗೆ ಎನ್ಕೌಂಟರ್ ಸರಿಯಾದ ಶಿಕ್ಷೆ ಎಂದರು.
ಪ್ರತಿ ಬಾರಿ ದೇಶದೆಲ್ಲೆಡೆ ಗಣಪತಿ ವಿಸರ್ಜನೆ ಮಾಡುವಾಗ ಲಕ್ಷಾಂತರ ಭಕ್ತರು ಸೇರಿ ಭವ್ಯ ಮೆರವಣಿಗೆ ಮಾಡುವಾಗ ಯಾವುದೇ ಚಿಕ್ಕ ಗಲಾಟೆ ಕೂಡ ಆಗುವುದಿಲ್ಲ. ಆದರೆ, ಮುಸ್ಲಿಂ ಹಬ್ಬದ ವೇಳೆ ಹಿಂದೂಗಳನ್ನು ಟಾರ್ಗೆಟ್ ಮಾಡಿ ಗಲಾಟೆ ಮಾಡಿ ಅಶಾಂತಿ ಮೂಡಿಸುವುದು ಪರಿಪಾಠವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ರಾಗಿಗುಡ್ಡದ ಗಲಭೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿದರೆ ಮುಸ್ಲಿಮರ ದೌರ್ಜನ್ಯಕ್ಕೆ ಒಳಗಾದ ಹಿಂದೂಗಳಿಗೆ ನ್ಯಾಯ ಸಿಗಬಹುದು. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಹಾಲಿ ನ್ಯಾಯಾಧೀಶರಿಂದಲೇ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.
ಶಿವಮೊಗ್ಗ ಎಸ್ಪಿ ಹಿಂದೂಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಶೀಘ್ರವೇ ಪ್ರಕರಣವನ್ನು ನ್ಯಾಯಾಧೀಶರಿಗೆ ಒಪ್ಪಿಸಬೇಕೆಂದರು.
ಬೆಂಗಳೂರು ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ದಲ್ಲಿ ಗಲಭೆ ಮಾಡಿದ ಮುಸ್ಲಿಮರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬಾರದು ಎಂದು ಮನವಿ ಮಾಡಿದರು.
ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡ ಇದೆ ಎಂದು ಹೇಳಿ ಅವಮಾನ ಮಾಡಿರುವ ಸಚಿವ ರಾಮಲಿಂಗರೆಡ್ಡಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಪ್ರಕರಣಕ್ಕೆ ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣ. ಮುಂಜಾಗ್ರತ ಕ್ರಮ ವಾಗಿ ಮೆರವಣಿಗೆ ನಡೆಯುವ ಹಾದಿಯಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಬೇಕಾಗಿತ್ತು. ಮೆರವಣಿಗೆ ದಾರಿಯಲ್ಲಿ ಟಿಪ್ಪು ಮತ್ತು ಔರಂಗಜೇಬ್ ಭಾವಚಿತ್ರ ಹಾಕಿದ್ದೂ ಅಲ್ಲದೇ ಹಿಂದೂ ಸೈನಿಕರನ್ನು ಅವಮಾನಿಸುವ ಪ್ಲೆಕ್ಸ್ ಹಾಕಿದಾಗ ಕೂಡಲೇ ಜಿಲ್ಲಾಡಳಿತ ತೆರವುಗೊಳಿಸಬೇಕಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಎಸ್.ಎಸ್. ಬೀರಪ್ಪ, ಪಾಲಾಕ್ಷಪ್ಪ, ತರಗನಹಳ್ಳಿ ರಮೇಶ್, ರಾಜು ಪಲ್ಲವಿ, ಬಸವನಹಳ್ಳಿ ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಕುಂದೂರು ಅನಿಲ್ ಮತ್ತಿತರರಿದ್ದರು.