1.5 ಲಕ್ಷ ಮತಗಳಿಂದ ಗೆಲುವಿನ ವಿಶ್ವಾಸ

1.5 ಲಕ್ಷ ಮತಗಳಿಂದ ಗೆಲುವಿನ ವಿಶ್ವಾಸ

ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ಭರವಸೆ ಇದೆ : ವಿನಯ್‌ಕುಮಾರ್‌

ದಾವಣಗೆರೆ, ಸೆ. 29 – ಮುಂಬರುವ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಇದೆ. 1.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವೂ ಇದೆ ಎಂದು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್‌ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿದೆ. ವರಿಷ್ಠರ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ.70ರಷ್ಟು ಅಹಿಂದ ಮತದಾರರಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಅವರಿಗೆ ಮುಂಚೆಯೇ ಟಿಕೆಟ್ ಸಿಕ್ಕಿದ್ದರೆ ಗೆಲ್ಲುವ ಅವಕಾಶ ಇತ್ತು ಎಂದು ವಿನಯ್‌ ಕುಮಾರ್ ಅಭಿಪ್ರಾಯ ಪಟ್ಟರು.

ಚನ್ನಯ್ಯ ಒಡೆಯರ್ ಅವರ ನಂತರ ಅಹಿಂದ ವರ್ಗದವರಿಗೆ ಕಾರಣಾಂತರಗಳಿಂದ ಅವಕಾಶ ಸಿಕ್ಕಿಲ್ಲ. ಈ ಬಾರಿ ನನಗೆ ಟಿಕೆಟ್ ಸಿಗಲಿದೆ ಹಾಗೂ ಕನಿಷ್ಠ 1.5-2 ಲಕ್ಷ ಮತಗಳಿಂದ ಗೆಲ್ಲುವ ಅಚಲ ವಿಶ್ವಾಸ ಇದೆ ಎಂದು ತಿಳಿಸಿದರು.

ಕ್ಷೇತ್ರದ ಯುವಕರ ಸಬಲೀಕರಣ ಹಾಗೂ ಜನರ ಸ್ವಾವಲಂಬಿ ಜೀವನಕ್ಕಾಗಿ ಬಿಜೆಪಿ ಸಂಸದರು ಕಳೆದ 30 ವರ್ಷಗಳಲ್ಲಿ ಏನೂ ಕೆಲಸ ಮಾಡಿಲ್ಲ. ದಾವಣಗೆರೆ ಕ್ಷೇತ್ರದಿಂದಲೇ ಬಿಜೆಪಿ ಹಟಾವೋ ಆರಂಭವಾಗಲಿದೆ. ಬಿಜೆಪಿಯ ವಿಚಾರಗಳು ಈಗ ಅವಧಿ ಮೀರಿದವಾಗಿವೆ. ರಾಷ್ಟ್ರೀಯತೆ ಹಾಗೂ ಕೋಮುವಾದದಂತಹ ವಿಚಾರಗಳಿಂದ ಮತ ಗಳಿಸಲು ಸಾಧ್ಯವಿಲ್ಲ ಎಂದವರು ಹೇಳಿದರು.

ಯುವಕರು ಅವಕಾಶ ವಂಚಿತರಾಗಿದ್ದಾರೆ. ನಿರುದ್ಯೋಗ ಹಾಗೂ ಬಡತನ ಹೆಚ್ಚಾಗಿದೆ. ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕೇಳುವುದೇ ಆಗಿದೆ. ಜನರು ಈ ಬಾರಿ ಕಾಂಗ್ರೆಸ್ ಪರವಾಗಿ ಲೋಕಸಭಾ ಚುನಾವಣೆಯಲ್ಲಿ 8-10 ಲಕ್ಷ ಮತ ಚಲಾವಣೆಯಾಗಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ವಾರಕ್ಕೆ ಎರಡು ದಿನ ಕುಗ್ರಾಮಗಳಲ್ಲಿ ವಾಸ ಮಾಡಿ ಅಲ್ಲಿನ ಜನರ ಕಷ್ಟಗಳನ್ನು ತಿಳಿಯುತ್ತೇನೆ. ಅವರ ಸಮಸ್ಯೆ ನಿವಾರಣೆಗೆ ರಾಜಕೀಯ ಹಾಗೂ ಸಾಮಾಜಿಕವಾಗಿ ಸ್ಪಂದಿಸುತ್ತೇನೆ. ಅಕ್ಟೋಬರ್ 8ರಂದು ಹರಿಹರದ ಕೊಪ್ಪದಲ್ಲಿ ಮೊದಲ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ವಿನಯ್‌ಕುಮಾರ್‌ ಹೇಳಿದರು.

error: Content is protected !!