ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹ

ದಾವಣಗೆರೆ, ಸೆ. 28- ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಕೂಡಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಗರ್ ಹುಕ್ಕುಂ ಸಾಗುವಳಿದಾರರ 12 ಲಕ್ಷಕ್ಕಿಂತಲೂ ಹೆಚ್ಚು ಅರ್ಜಿಗಳು ಸರ್ಕಾರದ ಮುಂದೆ ಇದ್ದರೂ ಹಕ್ಕುಪತ್ರ ನೀಡಿಲ್ಲ. ಇನ್ನೂ ಲಕ್ಷಾಂತರ ಭೂ ಹೀನ ಹಾಗೂ ಬಡ ಕೃಷಿ ಕಾರ್ಮಿಕರು ಹಕ್ಕುಪತ್ರ ಪಡೆಯಲು ಅರ್ಜಿ ಹಾಕಬೇಕೆಂದು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳದ ಪರಿಣಾಮ ಬಗರ್ ಹುಕ್ಕುಂ ಸಾಗುವಳಿದಾರರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆಂದು ಸಂಘಟನೆ ಮುಖಂಡರು ಹೇಳಿದರು.

ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಸಾಕಷ್ಟು ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಹಕ್ಕುಪತ್ರ ನೀಡುವವರೆಗೂ ಸಾಗುವಳಿದಾರರಿಗೆ ರಕ್ಷಣೆ ನೀಡಬೇಕು. ಕಿರುಕುಳ ತಪ್ಪಿಸಬೇಕು. ಸಾಗುವಳಿ ದಾರರನ್ನು ಮಾನವೀಯತೆ ದೃಷ್ಠಿಯಿಂದ ನೋಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿಲ್ಲ. 

ಕೂಡಲೇ ಸಮಿತಿಗಳನ್ನು ರಚಿಸಿ ನಂ. 57 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯಲ್ಲಿ ಪರಿಶೀಲಿಸಿ ಕೂಡಲೇ ಜಿಲ್ಲೆಯ ಎಲ್ಲಾ ಸಾಗುವಳಿದಾರರಿಗೆ ಹಕ್ಕುಪತ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ಉಪಾಧ್ಯಕ್ಷ ಬಸವರಾಜಪ್ಪ ನೀರ್ಥಡಿ, ಭೀಮಣ್ಣ ಮಾಯಕೊಂಡ, ನಾಗರಾಜ ರಾಮಗೊಂಡನಹಳ್ಳಿ, ಲೋಕೇಶ್ ನೀರ್ಥಡಿ ಮತ್ತಿತರರು ಭಾಗವಹಿಸಿದ್ದರು. 

error: Content is protected !!