ದಾವಣಗೆರೆ, ಸೆ. 27- ನಗರದ ಮಧ್ಯಭಾಗದ ಸೂಕ್ತ ಸ್ಥಳದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಿಸುವಂತೆ ಒತ್ತಾಯಿಸಿ, ಅಕ್ಟೋಬರ್ 2 ರಂದು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅಂಬೇಡ್ಕರ್ ಭವನ ನಿರ್ಮಾಣ ಸಂಚಲನಾ ಸಮಿತಿ ಹಾಗೂ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಲಿದ್ದಾರೆಂದು ಸಮಿತಿಯ ಪ್ರೊ.ಎ.ಬಿ. ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭವನ ನಿರ್ಮಾಣ ಆಗುವವರೆಗೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು. ಈ ಹೋರಾಟದಲ್ಲಿ ಪ್ರಗತಿಪರ ಚಿಂತಕರು, ಅಂಬೇಡ್ಕರ್ ಅಭಿಮಾನಿಗಳು, ರೈತ, ಕಾರ್ಮಿಕ ಮುಖಂಡರು, ಮಹಿಳಾ ಹೋರಾಟಗಾರ್ತಿಯರು, ವಕೀಲರು, ವಿದ್ಯಾರ್ಥಿ ಯುವಜನರು, ವಿವಿಧ ತಳಸಮುದಾಯದ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದರು.
ಇತ್ತೀಚಿಗೆ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ದಾವಣಗೆರೆಗೆ ಭೇಟಿ ನೀಡಿದಾಗ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದು, ಈ ಬಾರಿ ಶತಾಯಗತಾಯ ಭವನ ನಿರ್ಮಾಣ ಮಾಡಿಸಲೇ ಬೇಕೆಂಬ ಉದ್ದೇಶದಿಂದ ದಲಿತ ಸಂಘಟನೆಗಳು, ರೈತ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಗತಿ ಪರ ಚಿಂತಕರು, ಮಹಿಳಾ ಹೋರಾಟಗಾರ್ತಿಯರು, ವಕೀಲರು, ವಿವಿಧ ಶೋಷಿತ ವರ್ಗಗಳ ಮುಖಂಡರೂ ಸೇರಿ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿಯಲಾಗಿದೆ ಎಂದರು.
ಈ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಸಂದರ್ಭದಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿದ್ದವು. ಮಲ್ಲಿಕಾರ್ಜುನ್ ಅವರೇ ಸ್ವತಃ ಆಸಕ್ತಿ ವಹಿಸಿ ಭವನ ನಿರ್ಮಾಣದ ನೀಲನಕ್ಷೆ ತಯಾರು ಮಾಡಿಸಿ, ಸೂಕ್ತ ಸ್ಥಳದಲ್ಲಿ ಭವನ ನಿರ್ಮಿಸಿ ಕೊಡುವುದಾಗಿ ಹೇಳಿದ್ದರು. ಅದಾಗ್ಯೂ ಕಾಣದ ಕೈಗಳ ಕೈವಾಡದಿಂದ ಆ ಭರವಸೆಯೂ ಈಡೇರಲಿಲ್ಲ ಎಂದರು.
ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅಂಬೇಡ್ಕರ್ ಭವನ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎಂ. ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಹೆಚ್. ಮಲ್ಲೇಶ್ ಹರಿಹರ, ಕುಂದುವಾಡ ಮಂಜುನಾಥ್, ಬಿ.ಎಸ್. ವಾಗೀಶ್, ಅನೀಸ್ ಪಾಷ, ಹೆಚ್. ತಿಮ್ಮಣ್ಣ, ಎಲ್. ಜಯಪ್ಪ, ಸಿ.ಬಸವರಾಜ್, ಸೋಮ್ಲಾಪುರದ ಹನುಮಂತಪ್ಪ ಮತ್ತಿತರರಿದ್ದರು.