ಹೊನ್ನಾಳಿ : ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಅಧ್ಯಕ್ಷ ಪಿ.ಬಿ. ಶೈಲೇಶ್ ಸಂತಸ
ಹೊನ್ನಾಳಿ,ಸೆ.27- ಇಲ್ಲಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಎಲ್ಲಾ ಸದಸ್ಯರ ಸಲಹೆ-ಸಹಕಾರದಿಂದ, ನಾಲ್ಕೂ ಶಾಖೆಗಳೂ ಲಾಭದಾಯಕವಾಗಿ ನಡೆಯುತ್ತಿವೆ, 2022-23ನೇ ಸಾಲಿನಲ್ಲಿ 95.30 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಪಿ.ಬಿ.ಶೈಲೇಶ್ ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘವು ಸುರಹೊನ್ನೆ, ಸಾಸ್ವೆಹಳ್ಳಿ, ಕುಂದೂರು, ಚೀಲೂರುಗಳಲ್ಲಿ ಶಾಖೆಗಳನ್ನು ಹೊಂದಿದ್ದು ಕಳೆದ ವರ್ಷದ ಮಹಾಸಭೆಯ ತೀರ್ಮಾನದಂತೆ ಸಂಘದ ಸಾಮಾನ್ಯ ಸದಸ್ಯರು ಮರಣ ಹೊಂದಿದಲ್ಲಿ ಸದಸ್ಯರ ಕ್ಷೇಮ ನಿಧಿಯಿಂದ 5000 ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ 44 ಸದಸ್ಯರು ಮರಣ ಹೊಂದಿದ್ದು ಅವರಿಗೆ 1.99 ಲಕ್ಷ ಹಣ ಪಾವತಿಸಲಾಗಿದೆ. ಸಾಲಗಾರರ ಕ್ಷೇಮ ನಿಧಿಯನ್ನೂ ಪ್ರಾರಂಭ ಮಾಡಿದ್ದು ಇದುವರೆಗೂ ಒಟ್ಟು 18.34 ಲಕ್ಷ ಹಣ ಸಂಗ್ರಹವಾಗಿದೆ. ಇದರಲ್ಲಿ ಪ್ರಸಕ್ತ ವರ್ಷ 26 ಜನ ಮೃತ ಸಾಲಗಾರರಿಗೆ 9,08,570 ರೂ.ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಘವು ವಾರ್ಷಿಕವಾಗಿ 246.12 ಕೋಟಿ ವಹಿವಾಟು ನಡೆಸಿದ್ದು, 6.35 ಕೋಟಿ ಒಟ್ಟು ಆದಾಯ ಗಳಿಸಿದೆ. ಸಂಘವು ಪ್ರಸಕ್ತ ವರ್ಷ 95,30,140 ರೂ.ಗಳ ಲಾಭ ಗಳಿಸಿದ್ದು, 40 ಲಕ್ಷ ಆದಾಯ ತೆರಿಗೆಗೆ ಕಾಯ್ದಿರಿಸಿ 55,30,140 ರೂ.ಗಳ ನಿವ್ವಳ ಲಾಭ ಗಳಿಸಿರುತ್ತದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಸೊಸೈಟಿ ಕಾರ್ಯದರ್ಶಿ ಎಚ್.ಎನ್.ರುದ್ರೇಶ್, ಉಪಾಧ್ಯಕ್ಷರಾದ ಕೆ.ಜಿ.ಮಂಜುಳ, ನಿರ್ದೇಶಕರಾದ ಕೆ.ಎಸ್.ಶಿವಕುಮಾರ್, ಸಿ.ಶಂಕರಗೌಡ,
ಬಸವರಾಜ್, ಚನ್ನವೀರಪ್ಪ, ಚಂದ್ರಪ್ಪ, ಸತೀಶ್, ಕರಿಬಸಪ್ಪ, ಚೇತನ್ಕುಮಾರ್, ಕೆಂಚಪ್ಪ, ಕೃಷ್ಣಾನಾಯ್ಕ್ , ಯಶೋಧಮ್ಮ ಮತ್ತಿತರರು ಉಪಸ್ಥಿತರಿದ್ದರು.