ಮಹಾನಗರ ಪಾಲಿಕೆ ವಿಭಾಗೀಯ ಕಚೇರಿ ಸ್ಥಳಾಂತರಕ್ಕೆ ಆಗ್ರಹ

ದಾವಣಗೆರೆ, ಸೆ. 26 –  ಮಹಾನಗರ ಪಾಲಿಕೆ ಆವರಣದಲ್ಲಿದ್ದ ಕಂದಾಯ ಇಲಾಖೆಯ ವಿಭಾಗವನ್ನು ರಾಷ್ಟ್ರೀಯ ಹೆದ್ದಾರಿಯ ಜಿಲ್ಲಾ ಪಂಚಾಯತ್ ಎದುರಿನ ಸರ್ಕ್ಯೂಟ್ ಹೌಸ್  ಪಕ್ಕಕ್ಕೆ ಸ್ಥಳಾಂತರಿಸಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಕಾರಣ ಕಂದಾಯ ಇಲಾಖೆಯ ವಿಭಾಗವನ್ನು ಮತ್ತೆ ಮಹಾನಗರ ಪಾಲಿಕೆ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿ, ಶ್ರೀ ಆಂಜನೇಯ ಮಿಲ್ ಎಂಪ್ಲಾಯೀಸ್‌ ಯೂನಿಯನ್‍ನ ಅಧ್ಯಕ್ಷ ಹೆಚ್.ಜಿ.ಉಮೇಶ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಈ ಕುರಿತ ಮನವಿಯೊಂದನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಈ ಕುರಿತು ಪಾಲಿಕೆ ಆಯುಕ್ತರಿಗೆ ಸೂಕ್ತ ನಿದೇರ್ಶನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಈ ಕುರಿತು ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದಾಗ, ಈ ಕುರಿತು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಉಮೇಶ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ, ಸಂಘ, ಸಂಸ್ಥೆಗಳಿಗೆ ಯಾವುದೇ ಮಾಹಿತಿ ನೀಡದೆ ನಗರದ ಹೊರ ವಲಯಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡಿರುವ ಕಾರಣ ಆವರಗೆರೆ, ಶೇಖರಪ್ಪ ನಗರ, ಬಸಾಪುರ ಸೇರಿದಂತೆ ಇದರ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗಿದೆ. ಈ ಕಚೇರಿಗೆ ಹೋಗಲು 2 ಇಲ್ಲವೇ 3 ಬಸ್ಸುಗಳನ್ನು ಬದಲಿ ಮಾಡಿಕೊಂಡು ಹೋಗಬೇಕು. ಅಲ್ಲದೇ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು  ಮಾಡಿಸಿಕೊಳ್ಳಲು ಪದೇ ಪದೇ ಅಲೆದಾಡಲೇ ಬೇಕಾಗಿದೆ. ಅಧಿಕಾರಿ, ಸಿಬ್ಬಂದಿಗಳು ವಿಳಂಬ ನೀತಿಯನ್ನು ಅನುಸರಿ ಸುತ್ತಿರುವ ಕಾರಣ ಸಾರ್ವಜನಿಕರು ಇಷ್ಟೊಂದು ದೂರ ಹೋಗಿ ಕೆಲಸ ಮಾಡಿ ಕೊಳ್ಳಲು ಪರದಾಡುವಂತಾಗಿದೆ ಎಂದಿದ್ದಾರೆ.

ಕಾರಣ ಜಿಲ್ಲಾ ಉಸ್ತುವಾರಿ ಸಚಿವರು, ಸಾರ್ವಜನಿಕರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುಕೂಲ ಆಗುವಂತೆ ಮಹಾನಗರ ಪಾಲಿಕೆ ಆವರಣಕ್ಕೆ ಕಂದಾಯ ವಿಭಾಗವನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

error: Content is protected !!