ಕುಸಿದ ಆಡಳಿತ, ಕತ್ತಲೆ ಗ್ಯಾರಂಟಿ

ಕುಸಿದ ಆಡಳಿತ, ಕತ್ತಲೆ ಗ್ಯಾರಂಟಿ

ರಾಜ್ಯ ಸರ್ಕಾರಕ್ಕೆ ಗೋವಿಂದ ಕಾರಜೋಳ ತರಾಟೆ

ದಾವಣಗೆರೆ, ಸೆ. 7 – ಕಳೆದ ಮೂರೂವರೆ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಕುಸಿದಿದೆ. ಎಲ್ಲ ಕೆಲಸ ಬಂದ್ ಮಾಡಿ ಪರ್ಸೆಂಟೇಜ್ ಕೇಳುವ ನಿರ್ಲಜ್ಜತನ ಕಂಡು ಬರುತ್ತಿದೆ. ರಾಜ್ಯಕ್ಕೆ ಕತ್ತಲೆ ಎಂಬ 6ನೇ ಗ್ಯಾರಂಟಿ ನೀಡಲಾಗುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಗೋವಿಂದ ಕಾರಜೋಳ ತರಾಟೆಗೆ ತೆಗೆದುಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮರ್ಪಕವಾಗಿ ಕಲ್ಲಿ ದ್ದಲು ಸಂಗ್ರಹಣೆ ಮಾಡಿಕೊಳ್ಳದ ಕಾರ ಣ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ರಾಜ್ಯದಲ್ಲಿ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇದೆ. ಆದರೆ, 14-15 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸಲೂ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಅಘೋಷಿತ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರಾಜ್ಯವನ್ನು ಕತ್ತಲೆಗೆ ದೂಡಲಾಗುತ್ತಿದೆ. ರಾಜ್ಯವನ್ನು ಕತ್ತಲಲ್ಲಿ ಇಡುವುದು ಕಾಂಗ್ರೆಸ್‌ನ 6ನೇ ಗ್ಯಾರಂಟಿ ಆಗಿದೆ ಎಂದವರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಇನ್ನೂ ಬರ ಪರಿಸ್ಥಿತಿ ಘೋಷಣೆ ಮಾಡಿಲ್ಲ. ಮೇವು ಬ್ಯಾಂಕ್ ರೂಪಿಸಿಲ್ಲ, ಗೋಶಾಲೆ ಸ್ಥಾಪಿಸಿಲ್ಲ. ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಹಾಗೂ ಜನ ಗುಳೆ ಹೋಗದಂತೆ ತಡೆಯುವ ಕೆಲಸ ಆಗಿಲ್ಲ ಎಂದವರು ಆರೋಪಿಸಿದರು.

ಸರ್ಕಾರದ ವೈಫಲ್ಯದ ವಿರುದ್ಧ ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ಕಾರಜೋಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ,  ಮಾಜಿ ಶಾಸಕರಾದ ಪ್ರೊ. ಲಿಂಗಣ್ಣ, ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಸುಧಾ ಜಯರುದ್ರೇಶ್, ಶಾಂತರಾಜ ಪಾಟೀಲ್, ಬಿ.ಎಸ್. ಜಗದೀಶ್, ಡಿ.ಎಸ್. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!