ಮಾಯಕೊಂಡ : ನಿರಂತರ ವಿದ್ಯುತ್ ಪೂರೈಕೆ ಮತ್ತು ಬೆಳೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮಾಯಕೊಂಡ, ಸೆ. 6 – ನಿರಂತರ ವಿದ್ಯುತ್ ಪೂರೈಕೆಗೆ ಮತ್ತು ಬೆಳೆ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಮಾಯಕೊಂಡದಲ್ಲಿ ಪ್ರತಿಭಟನೆ ನಡೆಸಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಜನಪ್ರತಿನಿಧಿಗಳು ಯಾರನ್ನೂ ಕೇಳದೆ ಶಾಸಕರ, ಸಚಿವರ ವೇತನ ಭತ್ಯೆ ಹೆಚ್ಚಿಸುತ್ತಾರೆ. ರೈತರಿಗೆ ಪರಿಹಾರ ಕೊಡಲು ಹಣ ಇಲ್ಲ ಎನ್ನುತ್ತಾರೆ. ಪ್ರತಿ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ಬೇಕೇಬೇಕು. ಜನರಿಂದ ಪರೋಕ್ಷವಾಗಿ ರೂ.48,000 ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಅಸಂಘಟಿತ ವಲಯಕ್ಕೆ ರೈತರಿಂದ ಉದ್ಯೋಗ ದೊರಕುತ್ತಿದೆ ಎಂಬ ಗೌರವ ಸರ್ಕಾರಕ್ಕೆ ಇರಬೇಕು. ಜಗಳೂರು, ಹರಿಹರ, ಹೊನ್ನಾಳಿ ಬರಪೀಡಿತ ಪ್ರದೇಶ ಎಂದು ಘೋಷಿಸಿ, ದಾವಣಗೆರೆ ತಾಲ್ಲೂಕು ಕೈಬಿಡಲಾಗುತ್ತಿದೆ. 8.5 ಲಕ್ಷ ಜನ ಇರುವ ದಾವಣಗೆರೆಯನ್ನು ಉತ್ತರ, ದಕ್ಷಿಣ, ಮಾಯಕೊಂಡ ಎಂದು ತಾಲ್ಲೂಕು ಮಾಡದೇ ಮಾಯಕೊಂಡಕ್ಕೆ ವಂಚಿಸಲಾಗಿದೆ. ಸರ್ವೇ, ಕಂದಾಯ ಇಲಾಖೆ ನೌಕರರು ಜನರಿಗೆ ಸ್ಪಂದಿ ಸುತ್ತಿಲ್ಲ ಇಲ್ಲಿನ ಶಾಸಕರು ಸಮಸ್ಯೆ ಚರ್ಚಿಸಲು ಜನರನ್ನು ಕರೆದುಕೊಂಡು ಮುಖ್ಯಮಂತ್ರಿ ಹತ್ತಿರ ಹೋಗಬೇಕಿತ್ತು. ಎಲ್ಲಾ ಪಕ್ಷದವರೂ ರೈತರನ್ನು ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತ ಮುಖಂಡ ಗೌಡ್ರು ಅಶೋಕ, 40 ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಜನಪ್ರತಿನಿಧಿ, ಅಧಿಕಾರಿಗ ಳಿಂದ ಮಾಯಕೊಂಡ ನಿರ್ಲಕ್ಷಿತವಾಗಿದೆ. ಯಾವ ಸೌಕರ್ಯವೂ ಇಲ್ಲಿಲ್ಲ, ನಾಡಕಛೇರಿ ಮಿಷನ್ ಮನೆಯಂತಿದೆ. ರೂ. 450 ಕೋಟಿ ವೆಚ್ಚದ ಸಾಸ್ವೆಹಳ್ಳಿ ಯೋಜನೆಯಡಿ ನೀರು ಬಂದಿಲ್ಲ, ಕಾಮಗಾರಿ ನಿಂತು ಎಷ್ಟೋ ವರ್ಷವಾಗಿದ್ದು ಇದ ಕ್ಕಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ರಾಮಜೋಗಿ ಪ್ರತಾಪ್ ಮಾತನಾಡಿ, ಬೆಸ್ಕಾಂ ಅವ್ಯವಸ್ಥೆ ರೈತರನ್ನು ಹಿಂಸೆಗೀಡು ಮಾಡಿದೆ. ಒಣಗುತ್ತಿರುವ ಬೆಳೆಗೆ, ಅಡಿಕೆ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ, ಅಕ್ರಮ ಸರಬರಾಜು ಕೂಡಾ ನಡೆಯುತ್ತಿದೆ ಎಂದರು.
ಚಿನ್ನಸಮುದ್ರ ಭೀಮಣ್ಣ ಮಾತನಾಡಿ, ಕಳೆದ ವರ್ಷವೂ ಬೆಳೆ ಪರಿಹಾರ ವಿತರಿಸಲಿಲ್ಲ. ಈ ವರ್ಷವಾದರೂ ಪರಿಹಾರ ನೀಡಬೇಕು. ಅಣಜಿ, ಆನಗೋಡು, ಮಾಯಕೊಂಡ ಹೋಬಳಿಗೆ ಬೆಳೆ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿದರು.
ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಲಾಯಿತು. ಬೆಸ್ಕಾಂ ಶಾಖಾಧಿಕಾರಿ ಚೇತನ್, ವಿದ್ಯುತ್ ಸರಬರಾಜಿನ ಸಮಸ್ಯೆ ವಿವರಿ ಸಿದರು. ರೈತರ ಅನುಕೂಲಕ್ಕಾಗಿ ಹಗಲಿನಲ್ಲಿಯೇ ನಿರಂತರ 5 ತಾಸು ವಿದ್ಯುತ್ ಪೂರೈಸಲು ತಾಕೀತು ಮಾಡಲಾಯಿತು. ಆಂಜನೇಯ ದೇವಸ್ಥಾನದಿಂದ ಪ್ರತಿಭಟನೆಯೊಂದಿಗೆ ಸಾಗಿಬಂದು ಉಪತಹಶೀಲ್ದಾರ್ ಹಾಲೇಶಪ್ಪ ಅವರಿಗೆ ಮನವಿ ಸಲ್ಲಿಸಿದರು. ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್ ಮತ್ತು ರೈತ ಸಂಘದ ಪದಾಧಿಕಾರಿಗಳು ಇದ್ದರು.