ಸಚಿವ ಉದಯನಿಧಿ ಸ್ಟ್ಯಾಲಿನ್ ಹೇಳಿಕೆ ಖಂಡನೀಯ : ಕ್ರಮಕ್ಕೆ ಆಗ್ರಹ

ದಾವಣಗೆರೆ, ಸೆ.5- ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ, ರಾಷ್ಟ್ರದೋಹದ, ಕೋಮು ಪ್ರಚೋದನೆ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ಪುತ್ರ, ಯುವ ಕಲ್ಯಾಣ ಮತ್ತು ಕ್ರೀಡಾಭಿವೃದ್ಧಿ ಸಚಿವ ಉದಯನಿಧಿ ಅವರು ಕೇವಲ ಓಟ್‌ ಬ್ಯಾಂಕ್ ರಾಜಕೀಯ ಹಾಗೂ ಓಲೈಕೆಗಾಗಿ ಸನಾತನ ಹಿಂದೂ ಧರ್ಮವನ್ನು ಡೆಂಗ್ಯೂ, ಕೊರೋನಾ,  ಮಲೇರಿಯಾಗಳಿಗೆ ಸಮಾನವಾದುದು ಎಂದು ಹೇಳಿರುವುದು ಅತ್ಯಂತ ಖಂಡನೀಯ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುವುದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲಷ್ಕರ್ ಎ ತೋಯ್ಬ ಉಗ್ರವಾದಿ ಸಂಘಟನೆಗಿಂತ ಹಿಂದುತ್ವ ಸಂಘಟನೆಗಳು ಅಪಾಯಕಾರಿ ಎಂದು ಹೇಳಿಕೆ ನೀಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೇ ಹಲವಾರು ರಾಜಕೀಯ ಮುಖಂಡರು ಹಿಂದುತ್ವದ ನಿರ್ಮೂಲನೆ ಹೇಳಿಕೆ ನೀಡಿದ್ದಾರೆ. ದೇಶದ ಬಹುತೇಕ ಜನರ ಮನಸನ್ನು ಘಾಸಿಗೊಳಿಸಿರುವ, ಧರ್ಮಗಳ ನಡುವೆ ಕಿತ್ತಾಟ ಹಚ್ಚುವ ಕೆಲಸ ಮಾಡುತ್ತಿರುವ ಇಂತಹವರ ವಿರುದ್ಧ ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಇಂತಹ ಹೇಳಿಕೆಗಳ ಹಿಂದೆ ವಿದೇಶಿ ಮತಾಂತರಿಗಳ ಕೈವಾಡವಿದೆ. ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿರುವ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜು ನೀಲಗುಂದ, ಕೊಟ್ರೇಶ ಗೌಡ್ರು, ರಾಕೇಶ್, ಗುರುಪ್ರಸಾದ್, ರವಿಕಿರಣ್, ಚನ್ನಬಸವನಗೌಡ್ರು, ಪ್ರದೀಪ್ ಉಪಸ್ಥಿತರಿದ್ದರು. 

error: Content is protected !!