ಶಿವಲಿಂಗವನ್ನು ಕಾರಂಜಿ ರೂಪದಲ್ಲಿ ಅಲಂಕಾರಿಕ ವಸ್ತುವಾಗಿ ಬಳಕೆ : ಆಕ್ಷೇಪ

ದಾವಣಗೆರೆ, ಸೆ. 5- ಹಿಂದೂಗಳ ಆರಾಧ್ಯ ದೈವ ಶಿವಲಿಂಗವನ್ನು ಕಾರಂಜಿ ರೂಪದಲ್ಲಿ ಅಲಂಕಾರಿಕ ವಸ್ತುವನ್ನಾಗಿ ದೆಹಲಿಯ ಬೀದಿಗಳಲ್ಲಿ ಬಳಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಕೋಟ್ಯಾಂತರ ಭಾರತೀಯರಿಗೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಲ್. ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದೆಹಲಿಯ ದೌಲಾ ಕೌನನಲ್ಲಿ ಜಿ.20 ಶೃಂಗಸಭೆಯ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದ ಕಾರಂಜಿಗಳನ್ನು ಅಳವಡಿಸಿದ್ದಾರೆ. ಶಿವಲಿಂಗವನ್ನು  ಪೂಜಿಸುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಶಿವಲಿಂಗವನ್ನು ಗೌರವಿಸುವ ಸಮಸ್ತ ಹಿಂದೂಗಳಿಗೆ ತೋರಿದ ಅಗೌರವ ಇದಾಗಿದೆ ಎಂದು ಹೇಳಿದರು.

ಹಿಂದೂಗಳ ಪವಿತ್ರ ಸಂಕೇತವಾದ ಶಿವಲಿಂಗವನ್ನು ಅವಮಾನಿಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಕ್ಷಣ ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ಶಿವಲಿಂಗ ಆಕಾರದ ಅಲಂಕಾರಿಕ ಕಾರಂಜಿಗಳನ್ನು ತೆರವುಗೊಳಿಸಬೇಕು. ಶಿವಲಿಂಗಗಳನ್ನು ಸೂಕ್ತ ಗೌರವದ ಜೊತೆಗೆ ಸೂಕ್ತ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಾಕೀತು ಮಾಡಿದರು.

ವಾಸ್ತವದಲ್ಲಿ ಹಿಂದೂ ದೇವರನ್ನು ಬಿಜೆಪಿ ಕೇವಲ ಮತ ಸೆಳೆಯುವುದಕ್ಕಾಗಿ ಬಳಕೆ ಮಾಡುತ್ತದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಶಿವಕುಮಾರ್, ಸಿ. ಅರುಣ್ ಕುಮಾರ್, ಆದಿಲ್ ಖಾನ್, ಪ್ರೊ. ಧರ್ಮಾನಾಯ್ಕ, ರವೀಂದ್ರ ಇದ್ದರು. 

error: Content is protected !!