ತಂಬಾಕು ಉತ್ಪನ್ನ ಮಾರಾಟಗಾರರಿಗೆ ಪರವಾನಗಿ ಕಡ್ಡಾಯ : ಡಾ.ರಾಘವನ್

ದಾವಣಗೆರೆ, ಸೆ.3- ತಂಬಾಕು ಉತ್ಪನ್ನ ಮಾರಾಟ ಮಾಡುವವರು ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ತಿಳಿಸಿದರು.

ದೇಶಾದ್ಯಂತ ಐದು ಮಹಾನಗರ ಪಾಲಿಕೆಯಲ್ಲಿ ಸಾಂಕೇತಿಕವಾಗಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಕಡ್ಡಾಯಗೊಳಿಸಲಾಗುತ್ತಿದೆ. ಈ ಪೈಕಿ ಮಹಾನಗರ ಪಾಲಿಕೆಯಲ್ಲೂ ಪ್ರಾಯೋಗಿಕ ಯೋಜನೆ ಜಾರಿಗೊಳ್ಳಲಿದೆ. ಆದ್ದರಿಂದ ತಂಬಾಕು ಉತ್ಪನ್ನ ಮಾರಾಟಗಾರರು ಸೆಪ್ಟೆಂಬರ್ 21ರೊಳಗೆ ಪರವಾನಿಗೆ ಪಡೆಯಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಲಾಗಿದೆ. ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪರವಾನಿಗೆ ಕಡ್ಡಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಪರವಾನಿಗೆ ವಿಸ್ತರಿಸುವ ಉದ್ದೇಶವಿದೆ. ಇದರ ಜೊತೆಗೆ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ತಂಬಾಕು ಮಾರಾಟ ಮಾಡುವ ಅಂಗಡಿಗಳಲ್ಲಿ ಕೋಟ್ಫಾ ಕಾಯ್ದೆಯಲ್ಲಿ ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷವಾಗಿ ಜಾಹೀರಾತು ಉತ್ತೇಜನ ನಿಷೇಧಿಸಿದೆ. 18 ವರ್ಷದೊಳಗಿನ ಮಕ್ಕಳು,ಅಪ್ರಾಪ್ತ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸಿಗದಂತೆ ಮಾಡುವ ನಿಟ್ಟಿನಲ್ಲಿ ನಾಮಫಲಕ ಅಳವಡಿಸಬೇಕು. ಉತ್ಪನ್ನಗಳ ಮೇಲೆ ಉಚ್ಛ ನ್ಯಾಯಾಲಯ ನೀಡಿದ ಶೇ.85ರಷ್ಟು ಆರೋಗ್ಯ ಎಚ್ಚರಿಕೆ ಚಿಹ್ನೆಗಳಿಲ್ಲದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ನಿಷೇಧ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಶಿವನಕೆರೆ ಬಸವಲಿಂಗಪ್ಪ, ಮಹಾನಗರ ಪಾಲಿಕೆ ಸಮುದಾಯ ಆರೋಗ್ಯಾಧಿಕಾರಿ ಡಾ.ಸುಧೀಂದ್ರ, ರಮೇಶ್ ಪಾಟೀಲ್, ಸೋನು, ಕೆ.ಪಿ.ದೇವರಾಜ್ ಮತ್ತಿತರರಿದ್ದರು.

error: Content is protected !!