ಬಹುಮುಖ ಪ್ರತಿಭೆ ಅಂತರರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದೆ ಕುಮಾರಿ ಅದಿತಿ ಆಚಾರ್ಯ ಯುಎಸ್ಎ ಅವಳ ಭರತನಾಟ್ಯ ರಂಗಪ್ರವೇಶ ಅಮೆರಿಕದ ಶಿಕಾಗೋದಲ್ಲಿ ತುಂ ಬಾ ಅದ್ಭುತವಾಗಿ, ಶಾಸ್ತ್ರ ಬದ್ಧವಾಗಿ ನಡೆಯಿತು.
ಭಾರತೀಯರು ಹಾಗೂ ಅಮೆರಿಕಾದವರು ಸೇರಿದ್ದ ಸಮಾರಂಭದಲ್ಲಿ ಮೊದಲಿಗೆ ಪುಷ್ಪಾಂಜಲಿ, ಗಣೇಶ ಸ್ತುತಿ, ಕೌತ್ವಂ, ಶಬ್ದಂ, ವರ್ಣಂ, ಪದಂ, ಕೀರ್ತನೆ, ತನಿ ಆವರ್ತಂ, ದೇವರ ನಾಮ, ತಿಲ್ಲಾನ, ಮಂಗಳಂ ಪ್ರತಿಯೊಂದು ನೃತ್ಯದಲ್ಲಿ ಹಾವಭಾವ ಅಭಿನಯ ಎಲ್ಲವನ್ನು ತುಂಬಾ ಅದ್ಭುತವಾಗಿ ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅದಿತಿ ಆಚಾರ್ಯ ಮೂಲತಃ ದಾವಣಗೆರೆಯ ಕಲಾಪ್ರತಿಭೆ, ವಿದುಷಿ ಶ್ರೀಮತಿ ಆಶಾ ಅಡಿಗ ಆಚಾರ್ಯ ಅವರ ಮಗಳು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಚಂದ್ರಶೇಖರ ಅಡಿಗರವರ ಮೊಮ್ಮಗಳು. ಅದಿತಿಗೆ ತಾಯಿ ಯೇ ಗುರು. ಅದಿತಿ ಆಚಾರ್ಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಸಂಗೀತ, ನೃತ್ಯ, ಇಂಡಿಯನ್ ವಯೋಲಿನ್ ಮತ್ತು ವೆಸ್ಟರ್ನ್ ವಯೋಲಿನ್ ಸಹ ಅಭ್ಯಾಸ ಮಾಡುತ್ತಿದ್ದು, ಸಾಕಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಅನೇಕ ನೃತ್ಯರೂಪಕಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವರು. ಇವರು ಅಮೆರಿಕದ ಟೆಕ್ಸಾಸ್, ಸೆಂಟ್‌ಲೂಯಿಸ್, ಇಲಿನಾಯ್ಸ್, ಇಂಡಿಯಾ ಮುಂತಾದ ಕಡೆ ಪ್ರದರ್ಶನ ನೀಡಿರುವರು.
ಈ ರಂಗ ಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರಖ್ಯಾತ ಭರತನಾಟ್ಯ ಕಲಾವಿದೆ ಮೈಸೂರಿನ ವಿದುಷಿ ಡಾ. ವಸುಂಧರ ದೊರೆಸ್ವಾಮಿ, ನೃತ್ಯ ಗುರು ವಿದುಷಿ ಶ್ರೀಮತಿ ಕೃಪಾ ಭಾಸ್ಕರ್ ಅಮೆರಿಕ, ವಿದುಷಿ ಡಾ. ಚೇತನ ಆಚಾರ್ ಅಮೆರಿಕ ಹಾಗೂ ಶ್ವೇತಾ ಬೈಡ್ ಅರೋರ ಅಮೆರಿಕ ಮೇಯರ್, ಶ್ರೀಮತಿ ಚಂದ್ರಶೇಖರ ಅಡಿಗ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ದಾವಣಗೆರೆ, ಮತ್ತು ಗುರು ವಿದುಷಿ ಆಶಾ ಅಡಿಗ ಆಚಾರ್ಯು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ವಿದ್ವಾನ್ ರಘುರಾಮ್ ರಾಜಗೋಪಾಲ್, ವಿದ್ವಾನ್ ಎಸ್.ವಿ. ಬಾಲಕೃಷ್ಣ, ವಿದ್ವಾನ್ ವಿವೇಕ ಕೃಷ್ಣ, ವಿದ್ವಾನ್ ಗೋಪಾಲ ವೆಂಕಟರಮಣರಾವ್, ರಿದಂ ಪ್ಯಾಡ್ ವಿದ್ವಾನ್ ಅರುಣ್‌ಕುಮಾರ್ ಹಿನ್ನೆಲೆ ಸಂಗೀತ ನೀಡಿದರು.
ಸಂದೇಶ್ ಭಾರ್ಗವ್, ಡಾ. ರೂಪಾ ಕಾ ರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಆಚಾ ರ್ಯ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ದಾವಣಗೆರೆಯ ವಿದುಷಿ ಆಶಾ ಅಡಿಗ ಆಚಾರ್ಯ ಕಳೆದ 17 ವರ್ಷಗಳಿಂದಲೂ ಪತಿ ಶ್ರೀನಿವಾಸ ಆಚಾರ್ಯರೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದು ಆಚಾರ್ಯ ಪರ್ಫಾರ್ಮಿಂಗ್ ಆರ್ಟ್ಸ್ ಅಕಾಡೆಮಿಯ ಮೂಲಕ ಸಂಗೀತ ಮತ್ತು ನೃತ್ಯವನ್ನು ನೂರಾರು ಮಕ್ಕಳಿಗೆ ಕಲಿಸುತ್ತಿದ್ದು, ಅವರಿಗೆ ಜ್ಯೂನಿಯರ್ ಸೀನಿಯರ್ ಪರೀಕ್ಷೆಯನ್ನು ಕಟ್ಟಿಸಿರುತ್ತಾರೆ. ಹಾಗೆ ಇವರು ಇಲ್ಲಿಯವರೆಗೆ 23 ಶಿಷ್ಯರಿಗೆ ರಂಗ ಪ್ರವೇಶವನ್ನು ಮಾಡಿಸಿರುತ್ತಾರೆ. ಅನೇಕ ನೃತ್ಯ ರೂಪಕಗಳನ್ನು ನಿರ್ದೇಶಿಸಿ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದು.