ಮಾಜಿ ಶಾಸಕ ರೇಣುಕಾಚಾರ್ಯ ಪಕ್ಷ ಸೇರಲು ಜಿಲ್ಲಾ ಕಾಂಗ್ರೆಸ್ ವಿರೋಧ

ದಾವಣಗೆರೆ, ಆ.31- ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯರ ಈ ನಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯ ಕರ್ತರಲ್ಲಿ ಹಲವು ಅನುಮಾನಗಳಿಗೆ ಕಾರಣ ವಾಗಿದೆ.  ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾದರೆ, ಜಿಲ್ಲಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಹಿಂದುಳಿ ದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ರೇಣುಕಾಚಾರ್ಯ ಒಂದು ಕೋಮಿಗೆ ಮೀಸಲಾಗಿ ಮತ ಕೇಳುತ್ತಾರೆ. ಅವರ ತತ್ವ, ಸಿದ್ಧಾಂತವೇ ಬೇರೆ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳೇ ಬೇರೆ. ಇಂತಹ ವ್ಯಕ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಅವರಿಗೆ ಭ್ರಮನಿರಸನವಾಗಿದೆ ಎಂದು ಟೀಕಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ದಾವಣಗೆರೆ ಉತ್ತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ, ದಾವಣಗೆರೆ ಉತ್ತರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ದಕ್ಷಿಣ ಘಟಕದ ಅಧ್ಯಕ್ಷೆ ಶುಭ ಮಂಗಳ, ಮುಖಂಡರಾದ ಹರೀಶ್ ಬಸಾಪುರ, ಡೋಲಿ ಚಂದ್ರು, ಆಲಿ ರಹಮತ್ ಮತ್ತಿತರರಿದ್ದರು. 

error: Content is protected !!