ಸಾಹಿತಿಗಳಿಗೆ ಬೆದರಿಕೆ: ದಾವಣಗೆರೆಯಲ್ಲಿ ಶೋಧ

ದಾವಣಗೆರೆ, ಆ. 30-  ಸಾಹಿತಿ ಹಾಗೂ ಹೋರಾಟಗಾರರಿಗೆ ಜೀವ ಬೆದರಿಕೆ ಪತ್ರಗಳು ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾವಣಗೆರೆಯಲ್ಲಿಯೂ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ ಎನ್ನಲಾಗಿದೆ.

ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ, ಬೆಂಗಳೂರಿನ ಸಂಜಯನಗರ ಹಾಗೂ ಬಸವೇಶ್ವರ ನಗರ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಕಡತಗಳನ್ನು ಸಿಸಿಬಿ ಪೊಲೀಸರು ಈಗಾಗಲೇ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ದಾವಣಗೆರೆಯಲ್ಲಿರುವ ಆರೋಪಿಯೊಬ್ಬ, ಬೆದರಿಕೆ ಪತ್ರ ಕಳುಹಿಸಿರುವ ಮಾಹಿತಿ ಇದೆ. ಹೀಗಾಗಿ, ದಾವಣಗೆರೆಯಲ್ಲಿ ಶೋಧ ನಡೆಸಲಾಗುತ್ತಿದೆ ಎನ್ನಲಾಗಿದೆ.

ಸಾಹಿತಿಗಳಾದ ಕುಂ. ವೀರಭದ್ರಪ್ಪ, ಬಿ.ಎಲ್. ವೇಣು, ಬಂಜಗೆರೆ ಜಯಪ್ರಕಾಶ್, ಬಿ.ಟಿ. ಲಲಿತಾ ನಾಯಕ್, ವಸುಂಧರಾ ಭೂಪತಿ ಸೇರಿದಂತೆ, ಹಲವರಿಗೆ ಬೆದರಿಕೆ ಪತ್ರಗಳು ಬಂದಿದ್ದವು. 

ಈ ಬಗ್ಗೆ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಇತ್ತೀಚೆಗೆ ಆದೇಶ ಹೊರಡಿಸಿದ್ದರು.

ದಾವಣಗೆರೆಯ ಅಕ್ಕ–ಪಕ್ಕದಲ್ಲಿರುವ ರಾಣೆಬೆನ್ನೂರು, ಹರಿಹರ ಹಾಗೂ ಇತರೆ ನಗರಗಳ ಅಂಚೆ ಕಚೇರಿಗಳ ಮೂಲಕ ಪತ್ರಗಳು ಬಂದಿವೆ. ದಾವಣಗೆರೆಯಲ್ಲಿರುವ ಆರೋಪಿ, ತನ್ನ ಸುಳಿವು ಸಿಗಬಾರದೆಂದು ಬೇರೆಡೆ ಹೋಗಿ ಪತ್ರ ಕಳುಹಿಸಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

error: Content is protected !!