ದಾವಣಗೆರೆ, ಆ. 29 – ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶ ಬಳಸಿಕೊಳ್ಳಲು ನಗರದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸ್ಥಾಪನೆಯಾಗಿದ್ದ ಅಂತರರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ನೋಂದಣಿಗುಂಟು ಕೆಲಸಕ್ಕಿಲ್ಲ ಎಂಬಂತಾಗಿದೆ!
ವಿದೇಶಕ್ಕೆ ತೆರಳಬಯಸುವ ಕಾರ್ಮಿಕರಿಗೆ ನೆರವಾಗಲು ದಾವಣಗೆರೆ, ಉಡುಪಿ, ವಿಜಯಪುರ ಹಾಗೂ ಯಾದಗಿರಿಗಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ದಾವಣಗೆರೆಯಲ್ಲಿ ಜನವರಿ 6ರಂದು ಕೇಂದ್ರ ಪ್ರಾರಂಭಗೊಂಡಿತ್ತು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಫೆಬ್ರವರಿ 17 ಜಿಲ್ಲಾಡಳಿತ ಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಅಸಂಘಟಿತ ಕಾರ್ಮಿಕರಿಗೆ ಕೇಂದ್ರದ ಕುರಿತು ಮಾಹಿತಿಯನ್ನೂ ನೀಡಲಾಗಿತ್ತು.
ವಿದೇಶಕ್ಕೆ ತೆರಳಬಯಸುವ ಕಾರ್ಮಿಕರಿಗೆ ನೆರವಾಗಲು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು (ಕೆ.ಎಸ್.ಯು.ಡಬ್ಲ್ಯೂ.ಎಸ್.ಎಸ್.ಬಿ.) ಸಾಗರೋತ್ತರ ನೇಮಕಾತಿ ಸಂಸ್ಥೆ ಆರಂಭಿಸಲಾಗಿದೆ. ಈ ಸಂಸ್ಥೆಯು ಕಾರ್ಮಿಕರು ವಿದೇಶಕ್ಕೆ ತೆರಳಲು ಅಗತ್ಯ ನೆರವು ಕಲ್ಪಿಸಲಿದೆ. ಸಂಸ್ಥೆಯು ಉಚಿತವಾಗಿ ಕಾರ್ಮಿಕರಿಗೆ ನೆರವಾಗಲಿದೆ ಎಂದು ತಿಳಿಸಲಾಗಿತ್ತು.
ವಿದೇಶಕ್ಕೆ ತೆರಳುವುದರಿಂದ ಹಿಡಿದು, ವಾಪಸ್ಸಾದ ನಂತರ ಪುನರ್ವಸತಿ ಹಾಗೂ ವಿಮೆ ನೆರವು ಪಡೆಯುವವರೆಗೂ ಮಂಡಳಿಯ ಸಂಸ್ಥೆ ಸಹಾಯ ಮಾಡಲಿದೆ ಎಂದು ತಿಳಿಸಲಾಗಿತ್ತು.
ವಿದೇಶಕ್ಕೆ ತೆರಳಬಯಸುವ ಕಾರ್ಮಿಕರಿಗೆ ನೆರವಾಗಲು ಅಂತರರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಆರಂಭಿಸಲಾಗಿತ್ತು. ನಮ್ಮಲ್ಲಿಗೆ ಬರುವ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಳ್ಳುತ್ತಿದ್ದೇವೆ. ಉದ್ಯೋಗಾವಕಾಶದ ಬಗ್ಗೆ ನೇಮಕಾತಿ ಸಂಸ್ಥೆ ಕ್ರಮ ತೆಗೆದುಕೊಳ್ಳಬೇಕಿದೆ.
– ಇಬ್ರಾಹಿಂ ಸಾಬ್, ಜಿಲ್ಲಾ ಕಾರ್ಮಿಕ ಅಧಿಕಾರಿ
ವಿದೇಶಕ್ಕೆ ವಲಸೆ ತೆರಳಲು ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗಳಿವೆ. ಆದರೆ, ಇವು ಮೋಸ ಮಾಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ಸರ್ಕಾರಿ ಸಂಸ್ಥೆ ನಂಬಿಕಾರ್ಹ ಎಂದು ಹೆಸರು ನೋಂದಾಯಿಸಿದ್ದೆವು. ಆದರೆ, ಇದುವರೆಗೂ ಯಾವುದೇ ಮಾಹಿತಿಯಾಗಲೀ, ನೆರವಾಗಲೀ ದೊರೆತಿಲ್ಲ. ಇದರಿಂದಾಗಿ ನಿರಾಸೆಯಾಗಿದೆ.
– ಅಮ್ಜದ್ ಖಾನ್
ಇದುವರೆಗೂ ವಲಸೆ ಮಾಹಿತಿ ಕೇಂದ್ರದಲ್ಲಿ 134 ಜನ ಪ್ರಾಥಮಿಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಅಸಂಘಟಿತ ವಲಯದ ಕಾರ್ಮಿಕರು. ಮನೆ ಕೆಲಸ, ಫಿಟ್ಟರ್, ಎಲೆಕ್ಟ್ರೀಷಿಯನ್, ಟೈಲ್ಸ್, ಡ್ರೈವಿಂಗ್ ಇತ್ಯಾದಿ ಕೆಲಸಗಳಿಗೆ ಹೆಚ್ಚು ಜನರು ನೋಂದಣಿ ಮಾಡಿಸಿದ್ದಾರೆ.
ಅರ್ಜಿ ಸಲ್ಲಿಸಿದವರ ಪೈಕಿ ಮೂವರು, ಎರಡನೇ ಹಂತದಲ್ಲಿ ಹೆಚ್ಚಿನ ಮಾಹಿತಿಯನ್ನೂ ಕಾರ್ಮಿಕ ಇಲಾಖೆಗೆ ಸಲ್ಲಿಸಿದ್ದಾರೆ.
ಆದರೆ, ನೋಂದಣಿ ಮಾಡಿಸಿಕೊಂಡವರಿಗೆ ವಿದೇಶದ ಕೆಲಸ ಸಿಗುವುದು ಒತ್ತಟ್ಟಿಗಿರಲಿ, ಯಾವುದೇ ಉದ್ಯೋಗಾವಕಾಶದ ಮಾಹಿತಿಯೂ ಬಂದಿಲ್ಲ.
ಸಾಕಷ್ಟು ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗಳು, ಕಾರ್ಮಿಕರು ವಿದೇಶಗಳಿಗೆ ತೆರಳಲು ನೆರವಾಗುತ್ತಿವೆ. ಆದರೆ, ಕೆಲ ಸಂಸ್ಥೆಗಳು ಕಾನೂನು ಬಾಹಿರವಾಗಿ ಕೆಲಸ ಮಾಡುವ ಮೂಲಕ ಕಾರ್ಮಿಕರು ಸಮಸ್ಯೆಗಳನ್ನು ಎದುರಿಸಿದ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಸಾಗರೋತ್ತರ ನೇಮಕಾತಿ ಸಂಸ್ಥೆ ಸ್ಥಾಪಿಸಿ ಅಸಂಘಟಿತ ಕಾರ್ಮಿಕರಿಗೆ ನೆರವಾಗುವುದು ಯೋಜನೆಯ ಉದ್ದೇಶವಾಗಿತ್ತು.
ಆದರೆ, ನೇಮಕಾತಿ ಸಂಸ್ಥೆ ಇದುವರೆಗೂ ಉದ್ಯೋಗದ ಯಾವುದೇ ಮಾಹಿತಿ ರವಾನಿಸಿಲ್ಲ. ಆರು ತಿಂಗಳಾದರೂ ಯಾರಿಗೂ ನೆರವು ಸಿಕ್ಕಿಲ್ಲ. ಸರ್ಕಾರ ಬದಲಾದ ನಂತರ ಹಿಂದಿನ ನೇಮಕಾತಿ ಸಂಸ್ಥೆ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೂ ನೋಂದಣಿಯಾದವರಿಗೆ ಯಾವುದೇ ಸ್ಪಂದನೆ ಸಿಗದ ಕಾರಣ, ಹೊಸದಾಗಿ ನೋಂದಾಯಿಸಲೂ ಹೆಚ್ಚಿನ ಆಸಕ್ತಿ ಕಂಡು ಬರುತ್ತಿಲ್ಲ. ಒಟ್ಟಾರೆ ಈ ಯೋಜನೆ ಆರಂಭಿಕ ಹಂತದಲ್ಲೇ ಎಡವಿ ನಿಂತಲ್ಲೇ ನಿಂತಂತಾಗಿದೆ.