ಶೀಘ್ರವೇ `ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ವಿತರಣೆ

ಶೀಘ್ರವೇ `ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ವಿತರಣೆ

ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ

ದಾವಣಗೆರೆ, ಆ. 29- ರಾಜ್ಯದ ಎಲ್ಲಾ ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರಿಗೆ `ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.

ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಕಾರ್ಯದ ಹಿನ್ನೆಲೆಯಲ್ಲಿ ಅಕ್ಕಿ ವಿತರಣೆ ವಿಳಂಬವಾಗಿತ್ತು. ರಾಜ್ಯದಲ್ಲಿರುವ 1.28 ಕೋಟಿಯಷ್ಟು ಇರುವ ಕಾರ್ಡುಗಳ ಪೈಕಿ 1.7 ರಿಂದ 1.10 ಕೋಟಿ ಕಾರ್ಡುಗಳಿಗೆ 5 ಕೆಜಿ ಅಕ್ಕಿ ಹಣ ಪಾವತಿಸಲಾಗಿದೆ. ಶೀಘ್ರವೇ ಆಗಸ್ಟ್ ತಿಂಗಳ ಅಕ್ಕಿ ಹಣವನ್ನು ಪಾವತಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ನಾಲ್ಕನೆಯ `ಗೃಹಲಕ್ಷ್ಮಿ’ ಯೋಜನೆಗೆ ನಾಳೆ ದಿನಾಂಕ 30 ರಂದು ಮೈಸೂರಿನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಡಿಸೆಂಬರ್ ತಿಂಗಳಲ್ಲಿ `ಯುವನಿಧಿ’ ಯೋಜನೆಯನ್ನೂ ಸಹ ಪ್ರಾರಂಭಿಸಲಾಗುವುದು ಎಂದ ಅವರು, ರಾಜ್ಯದಲ್ಲಿ 21 ಲಕ್ಷದಷ್ಟು ಕಾರ್ಡ್‌ಗಳಿಗೆ ಬ್ಯಾಂಕ್ ಖಾತೆ ಇರಲಿಲ್ಲ. 7 ರಿಂದ 8 ಲಕ್ಷ ಕಾರ್ಡ್‌ಗಳಿಗೆ ಖಾತೆ ಮಾಡಿಸಲಾಗಿದೆ. ಹಾಗಾಗಿ ಹಣ ಪಾವತಿಸುವುದು ವಿಳಂಬವಾಗಿತ್ತು. ಎಲ್ಲಾ ಕಾರ್ಡುಗಳ ಪರಿಷ್ಕರಣೆ ಮುಗಿದ ನಂತರ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿ ಕಾರ್ಜುನ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಹಣ ನೀಡುವುದನ್ನು ಎಲ್ಲರೂ ಸ್ವಾಗತಿ ಸಿದ್ದಾರೆ. ಅನ್ನಭಾಗ್ಯ ನಿಜಕ್ಕೂ ಒಳ್ಳೆಯ ಯೋಜನೆ, ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ. ಹೈಕಮಾಂಡ್ ಟಿಕೆಟ್ ನೀಡಿದರೆ ನೋಡುತ್ತೇನೆ ಎಂದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲಬೇಕಿತ್ತು. ಕ್ಷೇತ್ರದ ಮತದಾರರು ಸೋಲಿಸಿದ್ದಾರೆ. ಗೆದ್ದಿದ್ದರೆ ಉತ್ತಮ ಸ್ಥಾನದಲ್ಲಿರುತ್ತಿದ್ದೆ. ನಾನು ಚಿಕ್ಕಂದಿನಿಂದಲೇ ಹೋರಾಟದ ಹಾದಿಯಲ್ಲಿ ಬಂದವನು. ಶೋಷಿತರು, ದಲಿತರು, ಬಡವರ ಪರ ಹೋರಾಟವನ್ನು ಮುಂದುವರೆಸುತ್ತೇನೆಂದು ಹೇಳಿದರು.

error: Content is protected !!