ದಾವಣಗೆರೆ, ಆ.28- ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ನಗರದ ಉಪಕಾರಾಗೃಹದ ಗೋಡೆ ಹತ್ತಿ ಜಿಗಿದು ಪರಾರಿಯಾಗಿದ್ದ. ಈತನನ್ನು ಪೊಲೀಸರು ಒಂದೇ ದಿನದಲ್ಲಿ ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರೂರು ಪ್ರದೇಶದ ನಿವಾಸಿ ವಸಂತ ಶನಿವಾರ ಜೈಲಿನಿಂದ ಪರಾರಿಯಾಗಿದ್ದ. ಬಸವನಗರ ಠಾಣೆಯ ಇನ್‌ಸ್ಪೆಕ್ಟರ್ ಗುರುಬಸವರಾಜ್ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಕಾನ್‌ಸ್ಟೇಬಲ್ ನಿಜಲಿಂಗಪ್ಪ ನೀಡಿದ ಖಚಿತ ಮಾಹಿತಿ ಆಧರಿಸಿ ಸಬ್ ಇನ್‌ಸ್ಪೆಕ್ಟರ್ ನಾಗರಾಜ ಮತ್ತು ಸಿಬ್ಬಂದಿಯು ಹರಿಹರ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಆರೋಪಿಯನ್ನು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಉಪ ಕಾರಾಗೃಹದ ಗೋಡೆ ಜಿಗಿದಾಗ ಆರೋಪಿಯ ಕಾಲಿಗೆ ಪೆಟ್ಟುಬಿದ್ದರೂ, ಅಲ್ಲಿಂದ ಪರಾರಿಯಾಗಿದ್ದ. ಬಳಿಕ ದುಗ್ಗಾವತಿಯ ಸಂಬಂಧಿಕರ ಮನೆಯೊಂದರಲ್ಲಿ ಅಡಗಿದ್ದ. ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ.