ದಲಿತರಿಗೆ ಅಕ್ಷರಾಭ್ಯಾಸ ಶರಣರ ಕ್ರಾಂತಿ

ದಲಿತರಿಗೆ ಅಕ್ಷರಾಭ್ಯಾಸ ಶರಣರ ಕ್ರಾಂತಿ

ಜಾಗತಿಕವಾಗಿ ಯಾವ ಭಾಷೆಯಲ್ಲೂ ಈ ಕ್ರಾಂತಿ ಆಗಿಲ್ಲ : ಮನು ಬಳಿಗಾರ್‌

ದಾವಣಗೆರೆ, ಆ. 26 – ದಲಿತರು ಹಾಗೂ ಹಿಂದುಳಿದವರಿಗೆ ಅಕ್ಷರಾಭ್ಯಾಸ ಮಾಡಿಸಿದ್ದಷ್ಟೇ ಅಲ್ಲದೇ, ಅವರಿಂದ ಸಾಹಿತ್ಯ ನಿರ್ಮಿಸಿದ ಕ್ರಾಂತಿ ಕನ್ನಡ ಹೊರತು ಪಡಿಸಿದರೆ ವಿಶ್ವದ ಯಾವ ಭಾಷೆಯಲ್ಲೂ ಆಗಿಲ್ಲ ಎಂದು ಕ.ಸಾ.ಪ. ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಮನು ಬಳಿಗಾರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದ ಬಹು ತೇಕರು ಅನಕ್ಷರಸ್ಥರಾಗಿದ್ದರು. ಹೀಗಿರುವ ಸಂದರ್ಭದಲ್ಲಿ 12ನೇ ಶತಮಾನದಲ್ಲೇ ದಲಿತರು ಹಾಗೂ ಹಿಂದುಳಿ ದವರಿಗೆ ಶರಣರು ಅಕ್ಷರಾಭ್ಯಾಸ ಮಾಡಿಸಿದ್ದು, ಜಾಗತಿಕ ವಾಗಿ ಬೇರೆ ಎಲ್ಲೂ ಆಗದ ಕ್ರಾಂತಿ ಎಂದವರು ಹೇಳಿದರು.

ಜಗತ್ತಿನಲ್ಲಿಯೇ ಅಪರೂಪವಾಗಿರುವ ಶರಣ ಕ್ರಾಂತಿಯಿಂದ 12ನೇ ಶತಮಾನದಲ್ಲಿ ಮಾನವೀಯ ಅಂಶಗಳು ಬೆಳೆದವು. ಕಾಯಕ, ದಾಸೋಹ ಹಾಗೂ ಅಪರಿಗ್ರಹಗಳು ಮಾನವೀಯತೆಯ ಪ್ರತೀಕವಾಗಿವೆ ಎಂದು ತಿಳಿಸಿದರು. 

ಕಾಯಕವು ತನು ಹಾಗೂ ಮನಗಳಿಂದ ಸಮರ್ಪಿತವಾಗಿರಬೇಕು. ಈ ರೀತಿಯ ಕಾಯಕದಿಂದ ಬಡವರಿಗೆ ಹಾಗೂ ನೋವುಂಡವರಿಗೆ ನೆರವಾಗಬೇಕು ಎಂಬುದು ಶರಣರ ತತ್ವವಾಗಿತ್ತು. ಆ ತತ್ವವನ್ನು ಮಾಗನೂರು ಬಸಪ್ಪ ಪಾಲಿಸಿ ದ್ದರು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಮಾಗನೂರು ಬಸಪ್ಪನವರು ಕಾಯಕ, ಕಾಸು ಹಾಗೂ ಕಾಲಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿದ್ದರು. ತಮ್ಮ ಕುಟುಂಬಕ್ಕೆ ಸೀಮಿತವಾಗದೇ ಸಮಾಜಕ್ಕೆ ಶ್ರಮಿಸಿದರು. ಶಿಕ್ಷಣ, ವ್ಯಾಪಾರ, ಧಾರ್ಮಿಕ ಸೇರಿದಂತೆ ಹಲವು ವಲಯಗಳಲ್ಲಿ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್ ಅವರಿಗೆ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸಿದ್ದರು.

ಚಿಕ್ಕಮಗಳೂರಿನ ಬಸವ ತತ್ವ ಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಮೇಲೆ ಸುನಂದದೇವಿ ಸಂಗಮೇಶ್ವರ ಗೌಡ್ರು, ಕ.ಸಾ.ಪ. ಗೌರವ ಕಾರ್ಯದರ್ಶಿ ಬಿ. ದಿಳ್ಳೆಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!