ದಾವಣಗೆರೆ, ಆ.27- ನೂತನ ಶಾಸಕರಿಗೆ ಕಾರು, ಬಂಗಲೆ, ಟಿಎ, ಡಿಎ, ಗ್ರ್ಯಾಂಟ್ ಮೇಲೆ ಅಧಿಕಾರ ನೀಡಿದ್ದರೂ, ಈಗ ಮತ್ತೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನೂ ಅವರಿಗೆ ನೀಡುತ್ತಾ ಕಾಂಗ್ರೆಸ್ ವರಿಷ್ಠರು ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಯಾವುದೇ ಸ್ಥಾನ-ಮಾನ ನೀಡದೇ ಕಡೆಗಣಿಸುತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ತರಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು, ಪಕ್ಷದ ಮುಖಂಡರನ್ನು ಶಾಸಕರನ್ನಾಗಿ, ಸಚಿವರನ್ನಾಗಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಇದೇ ಕಾರ್ಯಕರ್ತರು ಬೇಕು. ಪಕ್ಷದ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಕಾರ್ಯಕರ್ತರು ಬೇಕು, ಆದರೆ ಅಧಿಕಾರದಿಂದ ಮಾತ್ರ ಕಾರ್ಯಕರ್ತರನ್ನು ಹೊರಗಿಡಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಆಪರೇಷನ್ ಕಮಲ ಮಾಡಿದ ಬಿಜೆಪಿಗೆ ದೇಶದ ತುಂಬಾ ಕೆಟ್ಟ ಹೆಸರು ಬಂದಿದೆ. ಸಾವಿರಾರು ಕೋಟಿ ಹಣದಾಸೆಗೆ, ಅಧಿಕಾರದಾಸೆಗೆ ಬಿದ್ದು, ಉಂಡ ಮನೆಗೆ ದ್ರೋಹ ಬಗೆದು ಕಾಂಗ್ರೆಸ್ ಪಕ್ಷ ಕಷ್ಟದ ಸಮಯದಲ್ಲಿದ್ದಾಗ ನಡುನೀರಿನಲ್ಲಿ ಬಿಟ್ಟುಹೋದ ಪಕ್ಷಾಂತರಿಗಳಿಗೆ ಮಣೆ ಹಾಕಿ, ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಿ. ಪಕ್ಷ ಈಗ 135 ಸ್ಥಾನದ ಬಹುಮತ ಪಡೆದು ಅಧಿಕಾರ ಪಡೆದಿರುವಾಗ ಪಕ್ಷಾಂತರಿಗಳನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಏನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷ ಅಧಿಕಾರ ಕಳೆದುಕೊಂಡಾಗ ಗೆದ್ದೆತ್ತಿನ ಬಾಲ ಹಿಡಿದು ಅಧಿಕಾರ, ಹಣ ನೀಡುವ ಪಕ್ಷಗಳಿಗೆ ಪಕ್ಷಾಂತರಗೊಳ್ಳುತ್ತಾರೆ. ಇಂತವರಿಗೆ ಇರುವ ಬೆಲೆ, ನಿಯತ್ತಾಗಿ ದುಡಿಯುವ ಕಾರ್ಯಕರ್ತರಿಗಿಲ್ಲ. ಇಂತವರಿಗೆ ಅಧಿಕಾರ, ಸ್ಥಾನಮಾನ ನೀಡುವ ಬದಲು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುಧಾಮ ದಾಸ್ ಎಂಬುವವರು ನಿವೃತ್ತಿ ಹೊಂದಿ 1 ತಿಂಗಳು ಸಹ ಕಳೆದಿಲ್ಲ. ಅವರನ್ನು ಎಂಎಲ್ಸಿ ಮಾಡಲಾಗಿದೆ. ಹಲವಾರು ಬಾರಿ ಅಧಿಕಾರ ಕೊಟ್ಟವರಿಗೇ ಮತ್ತೆ ಮತ್ತೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ, ಎಂಎಲ್ಸಿ ಸ್ಥಾನ ಕೊಡುತ್ತಿದ್ದಾರೆ. ಹೀಗಾದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬೆಲೆಯಿಲ್ಲವೇ, ಅವರು ತಮ್ಮ ಕೊನೆಗಾಲದವರೆಗೂ ಕಾರ್ಯಕರ್ತರಾಗಿ ದುಡಿಯುತ್ತಲೇ ಇರಬೇಕೇ? ಎಂದು ದುಗ್ಗಪ್ಪ ಕೇಳಿದ್ದಾರೆ.