ಅತಿಥಿ- ಗೌರವ ಧನ ಶಿಕ್ಷಕರ ಪುನಶ್ವೇತನ ಕಾರ್ಯಾಗಾರದಲ್ಲಿ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್
ದಾವಣಗೆರೆ, ಆ.27- ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿರುವ ಅತಿಥಿ ಶಿಕ್ಷಕರು ಹಾಗೂ ಗೌರವ ಧನ ಶಿಕ್ಷಕರುಗಳಿಗೆ ಡಯಟ್ನಲ್ಲಿ ಮೊನ್ನೆ ಶೈಕ್ಷಣಿಕ ಪುನಶ್ವೇತನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
2023-24 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಶಿಕ್ಷಣ ಇಲಾಖೆಯು `ಗುಣಾತ್ಮಕ ಶೈಕ್ಷಣಿಕ ವರ್ಷ’ವನ್ನಾಗಿಸಲು ಪರಿಣಾಮಕಾರಿ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸಲು ವಾರ್ಷಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಶಾಲೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಅನೇಕ ಹುದ್ದೆಗಳು ಖಾಲಿ ಇರುತ್ತವೆ. ಮಕ್ಕಳ ಶೈಕ್ಷಣಿಕ ಪ್ರಗತಿಯು ಕುಂಠಿತವಾಗಲು ಇದು ಪ್ರಬಲ ಕಾರಣವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಶಿಕ್ಷಣ ಇಲಾಖೆಯ ವಿವಿಧ ಹಂತಗಳ ಅನುಷ್ಟಾನಾಧಿಕಾರಿಗಳಿಗೆ ನಡೆಸಿದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಗಳನ್ನು ಶೀಘ್ರವೇ ಮಾಡಿಕೊಂಡು ಸದರಿ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲು ಸೂಚಿಸಿ ಮಾರ್ಗದರ್ಶಿಸಿದ್ದರು. ಹಾಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಡಯಟ್ನ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ವಿಶಾಲಾಕ್ಷಿ ಹೆಚ್.ಆರ್. ಅವರು ಕಾರ್ಯಾಗಾರದ ಉದ್ದೇಶಗಳನ್ನು ಪ್ರಾಸ್ತಾವಿಕವಾಗಿ ತಿಳಿಸಿ, ಎಲ್ಲರನ್ನೂ ಸ್ವಾಗತಿಸಿದರು. ಡಯಟ್ ಪ್ರಾಚಾರ್ಯರಾದ ಎಸ್. ಗೀತಾ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲೆಯ ಗುಣಾತ್ಮಾಕ ಶಿಕ್ಷಣದ ಪ್ರಗತಿಗಾಗಿ ಶಿಕ್ಷಕರ ಜವಾಬ್ದಾರಿಗಳನ್ನು ತಿಳಿಸಿದರು.
ಮಾದರಿ ಪಾಠಯೋಜನೆ ಕುರಿತು ಹಿರಿಯ ಉಪನ್ಯಾಸಕರಾದ ಎನ್. ಲೋಲಾಕ್ಷಿ ಮಾತನಾಡಿದರು. ಶೈಕ್ಷಣಿಕ ಸಾಲಿನಲ್ಲಿ ಮಾಹೆವಾರು ಶಾಲೆಗಳಲ್ಲಿ ನಡೆಸಬೇಕಾದ ಚಟುವಟಿಕೆಗಳನ್ನು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಎಂ. ಶಶಿಕಲಾ ಶಿಕ್ಷಕರಿಗೆ ಪರಿಚಯಿಸಿದರು. ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಮೌಲ್ಯಮಾಪನದ ವಿಧಾನ ಹಾಗೂ ದಾಖಲೆಗಳ ನಿರ್ವಹಣೆ ಕುರಿತು ವಿಜ್ಞಾನ ವಿಷಯ ಪರಿವೀಕ್ಷಕಿ ವಸಂತಕುಮಾರಿ ಮಾಹಿತಿ ಹಂಚಿಕೊಂಡರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆಯ ಅಗತ್ಯತೆ ಮತ್ತು ವಿಧಾನಗಳನ್ನು ಡಯಟ್ ಉಪನ್ಯಾಸಕರಾದ ಎಸ್.ಆರ್ ಪೂರ್ಣಿಮಾ ತಿಳಿಸಿದರು.
ವಿಷಯವಾರು ಶಿಕ್ಷಕರನ್ನು ವಿವಿಧ ಗುಂಪುಗ ಳಾಗಿ ವಿಂಗಡಿಸಿ ವಿಷಯವಾರು ಪರಿವೀಕ್ಷಕರು ಹಾಗೂ ಡಯಟ್ ಉಪನ್ಯಾಸಕರುಗಳ ನೇತೃತ್ವದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಎಸ್.ಎಸ್.ಎಲ್.ಸಿ. ಫಲಿತಾಂಶ ವೃದ್ಧಿಗಾಗಿ ಅಳವಡಿಸಿಕೊಳ್ಳಬೇಕಾದ ಬೋಧನಾ ವಿಧಾನಗಳ ಬಗ್ಗೆ ಗುಂಪು ಚರ್ಚೆ ನಡೆಸಿ ಮಾರ್ಗದರ್ಶಿಸಲಾಯಿತು.