ಮಳೆ ಕೊರತೆ: ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬರ ಪೀಡಿತ ಘೋಷಿಸಲು ಮನವಿ

ಮಳೆ ಕೊರತೆ: ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬರ ಪೀಡಿತ ಘೋಷಿಸಲು ಮನವಿ

ದಾವಣಗೆರೆ, ಆ. 25- ತೀವ್ರ ಮಳೆ ಕೊರತೆಯ ಕಾರಣದಿಂದ  ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತಾಪಿ ವರ್ಗಕ್ಕೆ ಸ್ವಲ್ಪಮಟ್ಟಿ ಗಾದರೂ ಆಸರೆಯಾಗುವ ನಿಟ್ಟಿನಲ್ಲಿ ದಾವಣ ಗೆರೆ ಲೋಕಸಭಾ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯಯ್ಯ, ಕೃಷಿ ಸಚಿವ ಚೆಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಪತ್ರದ ಮೂಲಕ ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ. 

ದಾವಣಗೆರೆ  ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ಸೇರಿ 7 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯುಂಟಾಗಿದ್ದು, ಕೃಷಿಕ ವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಎಲ್ಲಾ ಲಕ್ಷಣಗಳಿವೆ. ಒಟ್ಟು ಬಿತ್ತನೆಯಾಗಿರುವ 1.85 ಲಕ್ಷ ಹೆಕ್ಟೇರ್‍ನಲ್ಲಿ ಭತ್ತದ ನಾಟಿ ಹೊರತುಪಡಿಸಿ 1.63 ಲಕ್ಷ ಹೆಕ್ಟೇರ್‍ನಲ್ಲಿ ಸುಮಾರು 1.27 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. 

ಇನ್ನುಳಿದ 0.33 ಸಾವಿರ ಹೆಕ್ಟೇರ್‍ನಲ್ಲಿ ಇತರೆ ಬೆಳೆಗಳಿವೆ.  1.63 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆಯಾಗಿರುವ ಸಂಪೂರ್ಣ ಬೆಳೆ ಸಕಾಲದಲ್ಲಿ ಮಳೆಯಿಲ್ಲದೇ ಒಣಗಿಹೋಗಿವೆ. ಬಿತ್ತನೆ ಪೂರ್ವ ಪ್ರಕ್ರಿಯೆ ಹಾಗೂ ಬಿತ್ತನೆ ನಂತರದ ಬೆಳೆಗಳ ಪೋಷಣೆ ಸೇರಿದಂತೆ, ಕನಿಷ್ಟ 20 ಸಾವಿರದಷ್ಟು ಹಣವನ್ನು ರೈತರು ಪ್ರತಿ ಎಕರೆಗೆ ಖರ್ಚು ಮಾಡಿದ್ದಾರೆ.  

ಈಗಾಗಲೇ ಸಾಕಷ್ಟು ಮಳೆ ಕೊರತೆಯನ್ನು ಜಿಲ್ಲೆ ಎದುರಿಸಿರುವುದರಿಂದ ಹಾಗೂ ಸಾಕಷ್ಟು ಬೆಳೆಹಾನಿ ಸಂಭವಿಸಿರುವುದರಿಂದ ಬರ ಎಂದು ಘೋಷಣೆ ಮಾಡುವ ಅನಿವಾರ್ಯತೆಯಿದೆ ಎಂದು ಸಿದ್ದೇಶ್ವರ ಹೇಳಿದ್ದಾರೆ. 

ಹಾಕಿದ ಬಂಡವಾಳವೂ ಕೂಡ ರೈತರಿಗೆ ಸಿಗದ ಪರಿಸ್ಥಿತಿ ಇರುವುದರಿಂದ ಕೂಡಲೇ ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡುವುದರ ಮೂಲಕ ಸಂಕಷ್ಟದಲ್ಲಿರುವ ರೈತರ ಹಿತ ಕಾಯುವಂತೆ ಕೋರಿದ್ದಾರೆ.

error: Content is protected !!