ಬೆಂಗಳೂರು ಹೆಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದಿಂದ ಯಶಸ್ವಿ ಯಕೃತ್ ಕಸಿ

ಬೆಂಗಳೂರು ಹೆಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದಿಂದ ಯಶಸ್ವಿ ಯಕೃತ್ ಕಸಿ

ದಾವಣಗೆರೆ, ಆ. 24- ಬೆಂಗಳೂರಿನ ಹೆಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಹೆಚ್‌ಪಿಬಿ ಮತ್ತು ಪಿತ್ತ ಜನಕಾಂಗ ಕಸಿ ಶಸ್ತ್ರಚಿಕಿತ್ಸಕ ಡಾ. ಬಸಂತ್ ಮಹದೇವಪ್ಪ ನೇತೃತ್ವದ ವೈದ್ಯರ ತಂಡ ನಗರದ 47 ವರ್ಷದ ನಂಜಪ್ಪ ಎಂಬುವರಿಗೆ ಯಕೃತ್ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಬಸಂತ್ ಮಹದೇವಪ್ಪ ಅವರು, ಆಲ್ಕೋಹಾಲ್ ರಹಿತ ಸ್ಟಿಟೋಹೆಪಟೈಟಸ್ (ಎನ್‌ಎಎಸ್‌ಎಚ್) ಮತ್ತು ಮಧುಮೇಹದಿಂದ ಉಂಟಾಗುವ ಯಕೃತ್ ವೈಫಲ್ಯದ ವಿರುದ್ಧ ಹೋರಾಡಿ ಜಯಿಸಿದ   ನಂಜಪ್ಪ ಅವರು ಶಸ್ತ್ರಚಿಕಿತ್ಸೆ ನಂತರವೂ ಆರೋಗ್ಯವಾಗಿದ್ದಾರೆ ಎಂದರು.

ಅನೇಕ ಸವಾಲುಗಳನ್ನು ಎದುರಿಸಿದ ನಂಜಪ್ಪ ಅವರು ಆರಂಭದಲ್ಲಿ 2017 ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಹೆಚ್‌ಸಿಜಿ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಕಾಮಾಲೆ ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆಯೊಂದಿಗೆ ವಾಂತಿ, ರಕ್ತ ಮತ್ತು ಪ್ರಜ್ಞಾಹೀನತೆಯ ಅನೇಕ ಸಮಸ್ಯೆಗಳಿಂದ ಅವರು ಹೋರಾಡಿದರು. ಅವರ ಜೀವನದ ಗುಣಮಟ್ಟ ಕೂಡ ಹದಗೆಟ್ಟಿತ್ತು. ಈ ರೋಗ ಲಕ್ಷಣಗಳಿಂದ ಆಹಾರ ಸೇವನೆಯನ್ನು ಕಡಿಮೆಯಾಗುವಂತೆ ಮಾಡಿತು. ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಕೃಷಿಕನಾಗಿದ್ದ ನಂಜಪ್ಪ ಅವರಿಗೆ ದೈನಂದಿನ ಜವಾಬ್ದಾರಿಯನ್ನು ನಿಭಾಯಿಸಲು ಸಹ ಕಷ್ಟವಾಯಿತು ಎಂದು ವಿವರಿಸಿದರು.

ನಂಜಪ್ಪ ಅವರ ಆರೋಗ್ಯವನ್ನು ಯಥಾಸ್ಥಿತಿಗೆ ತರಲು ವೈದ್ಯರು ತಮ್ಮ ಚಿಕಿತ್ಸೆಯನ್ನು ಆರಂಭಿಸಿದರು. ನಂಜಪ್ಪ ಕೂಡ ನನ್ನ ಹಾಗೂ ವೈದ್ಯರ ತಂಡದ ಮೇಲೆ ನಂಬಿಕೆ ಇಟ್ಟಿದ್ದರು. ಯಕೃತ್ ಕಸಿ ಅತ್ಯಂತ ಕಾರ್ಯಸಾಧುವಾದ ಪರಿಹಾರ ಎಂದು ವೈದ್ಯರು ನಿರ್ಧರಿಸಿದರು. ವೈದ್ಯರ ತಂಡ ಯಕೃತ್ ಕಸಿಯ ನ್ನು ಯಶಸ್ವಿಯಾಗಿ ನಿರ್ವಹಿಸಿತು. ನಂಜಪ್ಪ ಅವರ ಆರೋಗ್ಯ ಚೇತರಿಕೆಯ ಲಕ್ಷಣವನ್ನು ಸಹ ಕಂಡಿತು ಎಂದು ಹೇಳಿದರು.

ದಾವಣಗೆರೆಯವರೇ ಐವರು ಯಕೃತ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಅವರೆಲ್ಲರೂ ಸಹ ಗುಣಮುಖರಾಗುತ್ತಿದ್ದಾರೆಂದು ಮಾಹಿತಿ ನೀಡಿದರು. 

ಯಕೃತ್ ವೈಫಲ್ಯ ತಡೆಗಟ್ಟಲು ಸರಿಯಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು, ಮಿತ ಆಹಾರದ ಕಡೆ ಗಮನ ಕೊಡುವುದು. ಮದ್ಯಪಾನದಿಂದ ದೂರವಿರುವುದು, ನಿತ್ಯ ವ್ಯಾಯಮ, ಉತ್ತಮ ನಡಿಗೆ, ಯೋಗ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

error: Content is protected !!