ಹರಿಹರ ತಾಲ್ಲೂಕಿನ ಹನಗವಾಡಿ ಪ್ರೊ. ಕೃಷ್ಣಪ್ಪ ಭವನ, ಮೈತ್ರಿ ವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಬೆಂಗಳೂರು ಇವರ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ `ದಲಿತ ಚಳವಳಿ ಅಂದು, ಇಂದು, ಮುಂದು’ ಕುರಿತ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ನ್ಯಾಯಮುರ್ತಿ ನಾಗಮೋಹನ್ ದಾಸ್ ಶಿಬಿರ ಉದ್ಘಾಟಿಸುವರು. ಸಂಘದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾದ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷರಾದ ಇಂದಿರಾ ಕೃಷ್ಣಪ್ಪ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಎ.ಬಿ. ರಾಮಚಂದ್ರಪ್ಪ, ಸಂಘದ ಕಾರ್ಯದರ್ಶಿ ಡಾ.ಬಿ.ಎನ್. ಉಮೇಶ್, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ ಭಾಗವಹಿಸಲಿದ್ದಾರೆ.
12.30 ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ `ಜಾತಿ ವಿನಾಶದ ಪರಿಕಲ್ಪನೆ’ ಕುರಿತು ಚನ್ನಪಟ್ಟಣದ ಉಪನ್ಯಾಸಕ ಡಾ. ಡಿ.ಆರ್. ದೇವರಾಜ್ ಮಾತನಾಡಲಿದ್ದಾರೆ.
2.30 ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ `ಸಮಕಾಲೀನ ಸಮಾಜದ ಅವಲೋಕನ: ಸವಾಲುಗಳು ಮತ್ತು ಸಾಧ್ಯತೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ (ಕ್ರಾಂತಿ ಮತ್ತು ಪ್ರತಿ ಕ್ರಾಂತಿ) ಕೃತಿಯ ಹಿನ್ನೆಲೆಯ’ ಕುರಿತು ವಿಕಾಸ್ ಮೌರ್ಯ ಮಾತನಾಡಲಿದ್ದಾರೆ.
ಸಂಜೆ 4 ಗಂಟೆಗೆ ಗುಂಪು ಚರ್ಚೆ ಬಳಿಕ ಸಂಜೆ 6 ಗಂಟೆಗೆ ಅಂಬೇಡ್ಕರ್ ಮೂವ್ಮೆಂಟ್ ಕುರಿತು ಸಿನಿಮಾ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಐವಾನ್ ಡಿಸಿಲ್ವಾ ನಡೆಸಿಕೊಡಲಿದ್ದಾರೆ.