ಗ್ಯಾರಂಟಿಗೆ ಎಸ್ಸಿ, ಎಸ್ಟಿ ಹಣ : ದಸಂಸ ಖಂಡನೆ

ಗ್ಯಾರಂಟಿಗೆ ಎಸ್ಸಿ, ಎಸ್ಟಿ ಹಣ : ದಸಂಸ ಖಂಡನೆ

ಹರಿಹರ, ಆ. 4 – ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನದಲ್ಲಿ (ಎಸ್.ಸಿ.ಪಿ, ಮತ್ತು ಟಿ.ಎಸ್.ಪಿ.) 11,000 ಕೋಟಿ ರೂ.ಗಳನ್ನು ಐದು ಗ್ಯಾರಂಟಿಗಳ ಜಾರಿಗಾಗಿ ಬಳಕೆ ಮಾಡುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ತೀರ್ಮಾನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲ್ಲೂಕು ಘಟಕ ತೀವ್ರವಾಗಿ ವಿರೋಧಿಸಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2023-24ನೇ ಸಾಲಿನ ಬಜೆಟ್‍ನಲ್ಲಿ 34,000 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಈ ಹಣದಲ್ಲಿ   11,000 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಳಸುವುದು ಕಾನೂನು ಬಾಹಿರ ಎಂದು ಸಮಿತಿಯ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಇ.ಪಿ., ಟಿ.ಎಸ್.ಪಿ ಯೋಜನೆಯ ಅನುದಾನ ದುರ್ಬಳಕೆ ಆಗಿದೆ ಎಂದು ಈ ಹಿಂದೆ ವಿರೋಧ  ಪಕ್ಷದ ನಾಯಕರಾಗಿದ್ದ,  ಸಿದ್ದರಾಮಯ್ಯನವರೇ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್.ಇ.ಪಿ, ಟಿ.ಎಸ್.ಪಿ ಕಾಯ್ದೆಯ ಸೆಕ್ಷನ್ 7 (ಡಿ) ಯನ್ನು ರದ್ದು ಪಡಿಸಿದ್ದು ವಿಪರ್ಯಾಸವಾಗಿದೆ ಎಂದು ಮಹಾಂತೇಶ್ ಹೇಳಿದ್ದಾರೆ.

ಈ ಅನುದಾನದಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಹಾಸ್ಟೆಲ್ ಮತ್ತು  ವಸತಿ ಶಾಲೆಗಳ ನಿರ್ಮಾಣ, ವಸತಿ ಶಾಲೆಗಳ ಭೂಮಿ ಖರೀದಿಗೆ ಮತ್ತು ಗಂಗಾ ಕಲ್ಯಾಣ ಯೋಜನೆಗೆ ಬಳಸಬೇಕೆಂದು ಸಮಿತಿಯು ಸರ್ಕಾರವನ್ನು ಒತ್ತಾಯಿಸುತ್ತದೆ. ಇಲ್ಲವಾದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ.

error: Content is protected !!