ತಂಬಾಕು ಕುತೂಹಲ ಹುಟ್ಟಿಸಿ, ವ್ಯಸನವಾಗುತ್ತದೆ

`ಸಂವಾದದಲ್ಲಿ’ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಕೆ.ಪಿ.ದೇವರಾಜ್ ಎಚ್ಚರಿಕೆ

ದಾವಣಗೆರೆ,  ಆ.1- ಒಂದು ದೇಶವನ್ನು ಸಂಪೂರ್ಣ ನಾಶ ಮಾಡಲು ಅಣುಬಾಂಬ್, ನ್ಯೂಕ್ಲಿಯರ್ ಮಿಸೈಲ್, ಶತೃರಾಷ್ಟ್ರ ಯಾವುದೂ ಬೇಕಿಲ್ಲ. ಆ ದೇಶದ ಯುವ ಜನತೆಯನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರಷ್ಟೇ ಸಾಕು. ಆದ ಕಾರಣ ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು ಮತ್ತು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ಮುಂದಾಗಬೇಕು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಎಂದು ಮನವಿ ಮಾಡಿದರು.

 ಶ್ರೀಮತಿ ನೀಲಮ್ಮ ಬೇತೂರು ಬಸಪ್ಪ ಪ್ರೌಢಶಾಲೆಯಲ್ಲಿ `ರಾಷ್ಟ್ರ ನಿರ್ಮಾಣಕ್ಕೆ  ತಂಬಾಕು, ಮತ್ತಿತರೆ ದುಶ್ಚಟಗಳಿಂದ ದೂರವಿರಿ’ ಎಂಬ ವಿಷಯದ ಬಗ್ಗೆ  ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ನಮ್ಮ ಭಾರತದ ಭವಿಷ್ಯ ಸೃಷ್ಟಿಸುವ ಯುವಕರು   ಇತ್ತೀಚೆಗೆ ಗುಟ್ಕಾ, ಧೂಮಪಾನ ಮತ್ತು ಮದ್ಯಪಾನದ ದುಶ್ಚಟಗಳಿಗೆ ಬಲಿಯಾಗಿ ಸ್ವತಃ ತಮ್ಮ ಆರೋಗ್ಯ, ಹಣ ಮತ್ತು ಚಾರಿತ್ರ್ಯವನ್ನು ಹಾಳು ಮಾಡಿಕೊಂಡು ಸಾವಿನ ದವಡೆಗೆ ಪ್ರಯಾಣಿಸುತ್ತಿರುವುದು ನೋವಿನ ಸಂಗತಿ. ತಂಬಾಕು ಸೇವಿಸುವವರಿಗೆ ಕ್ಯಾನ್ಸರ್, ದಮ್ಮು, ಹೃದಯಾಘಾತ, ಕುರುಡುತನ, ಸಂಕಟ, ನಪುಂಸಕತ್ವ, ಮರಣ ಇತ್ಯಾದಿ ಖಚಿತವೆಂದು ತಿಳಿಸಿದರು. 

ತಂಬಾಕು ಸೇವನೆ ಮಾಡುವವರಿಗೆ ವಿನಯ ಮತ್ತು ಪ್ರೀತಿಯಿಂದ ತಂಬಾಕು ಸೇವಿಸದಂತೆ ಮಾಡಲು ಹಿರಿಯರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು  ಆರ್.ಬಿ.ಪಾಟೀಲ್  ತಿಳಿಸಿದರು.

ಜಿಲ್ಲಾ ತಂಬಾಕು  ನಿಯಂತ್ರಣ ಕೋಶಾಧಿಕಾರಿ ದೇವರಾಜ್  ಕೆ.ಪಿ. ಅವರು    ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು  ಚಿತ್ರಗಳ ಸಮೇತ ವಿವರಿಸಿದರು. ತಂಬಾಕು ಮಕ್ಕಳಿಗೆ ಮೊದಲು ಕುತೂಹಲ ಹುಟ್ಟಿಸಿ, ಹವ್ಯಾಸವಾಗಿ, ಚಟವಾಗಿ ನಂತರ ವ್ಯಸನವಾಗುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಂದ ತಂಬಾಕು ಸೇವನೆ ಮಾಡುವುದಿಲ್ಲವೆಂದು ಪ್ರತಿಜ್ಞಾ ಸ್ವೀಕಾರ ಮಾಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ  ಬಿ.ಎಂ.ಮಹೇಶ್ವರಯ್ಯ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಮುಖ್ಯ ಅತಿಥಿ   ಬಸವರಾಜ್ ಮಲ್ಲಾಬಾದಿ ಮಕ್ಕಳಿಗೆ ಹಿತ ವಚನ ನೀಡಿದರು. ಶಾಲೆಯ  ಶಿಕ್ಷಕ ರಾಜು ಬಣಕಾರ್ ಸ್ವಾಗತಿಸಿದರು, ಕೆ.ಸಿ.ಬಸವರಾಜ್  ನಿರೂಪಿಸಿದರು ಮತ್ತು  ಕೊಟ್ರೇಶ್ ಮಲ್ಲನಗೌಡ ವಂದಿಸಿದರು.

error: Content is protected !!