`ತುಮಾರೆ ಸಿವಾ ಔರ್ ಕೋಯಿ ನಹಿ’ ಹಿಂದಿ ವಚನ ನೃತ್ಯರೂಪಕ

`ತುಮಾರೆ ಸಿವಾ ಔರ್ ಕೋಯಿ ನಹಿ’ ಹಿಂದಿ ವಚನ ನೃತ್ಯರೂಪಕ

 ನಾಳೆಯಿಂದ ಸಾಂಸ್ಕೃತಿಕ ಅಭಿಯಾನ

ಸಾಣೇಹಳ್ಳಿ, ಜೂ. 30- ಕನ್ನಡ ನಾಡಿನಲ್ಲಿ ಸೂರ್ಯನೋಪಾದಿಯಲ್ಲಿ ಉದಯಿಸಿದವರು ಬಸವಣ್ಣ.  ಅವರು ತಮ್ಮ ಸಾಧನೆಯ ಮೂಲಕ ಭಕ್ತಿ ಭಂಡಾರಿ, ಜಗದಣ್ಣ, ವಿಶ್ವಗುರು ಎಂದು ಪ್ರಖ್ಯಾತರಾದರು ಎಂದು ಶ್ರೀ ಶಿವಕುಮಾರ ಕಲಾಸಂಘದ ಅಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು  ಬಣ್ಣಿಸಿದ್ದಾರೆ.

ಬಸವಣ್ಣನವರ 38 ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ಅವುಗಳಿಗೆ ಸಿ.ಅಶ್ವತ್ಥ್‌ ಅವರ ಸಂಗೀತ ಅಳವಡಿಸಿಕೊಂಡು ಹಿಂದಿ ಗಾಯಕರಿಂದ ಹಾಡಿಸಿ  `ತುಮಾರೆ ಸಿವಾ ಔರ್ ಕೋಯಿ ನಹಿ’ ಎನ್ನುವ ಶೀರ್ಷಿಕೆಯಡಿ ವಚನಗಳಿಗೆ ಭಾವಪೂರ್ಣವಾಗಿ 24 ಜನ ನೃತ್ಯ ಕಲಾವಿದೆಯರು ಅಭಿನಯಿಸಲಿದ್ದಾರೆ. ಇದೊಂದು ವಿಶಿಷ್ಟ, ವಿನೂತನ ಮತ್ತು ಭಾರತ ದೇಶದಲ್ಲೇ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನವಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. 

ಇಂದು ದೃಶ್ಯ (ದೂರದರ್ಶನ) ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ (ಮೊಬೈಲ್, ವಾಟ್ಸಪ್, ಯೂಟೂಬ್, ಫೇಸ್‍ಬುಕ್ ಇತ್ಯಾದಿ) ಅಂಟಿಕೊಂಡಿರುವ ಜನರು ಶರಣರ ವಚನ ಸಾಹಿತ್ಯದತ್ತ ಗಮನ ಹರಿಸುವುದು ಅಷ್ಟಕ್ಕಷ್ಟೆ ಆಗಿದೆ. ಹೀಗೇ ಮುಂದುವರಿದರೆ ಮುಂದೆ ವಚನಗಳನ್ನು ಓದುವ ಆಸಕ್ತಿಯೇ ಕಮರಿಬಿಡಬಹುದು. ಹೀಗಾಗಬಾರದು ಎನ್ನುವ ಹಿನ್ನೆಲೆಯನ್ನಿಟ್ಟುಕೊಂಡು

ಕಲಾಸಂಘ ಮತ್ತು ಶ್ರೀಮಠದ ಅಡಿಯಲ್ಲಿ ನಾಟಕ, ವಚನಗೀತೆ, ವಚನ ನೃತ್ಯ, ಮತ್ತೆ ಕಲ್ಯಾಣ, ಶ್ರಾವಣ ಸಂಜೆ, ಪುಸ್ತಕ ಪ್ರಕಟಣೆ, ಇಷ್ಟಲಿಂಗ ದೀಕ್ಷೆ, ಸರ್ವಶರಣರ ಸಮ್ಮೇಳನ ಮತ್ತಿತರ ಕಾರ್ಯಯೋಜನೆ ಗಳನ್ನು ನಿರಂತರವಾಗಿ ಆಯೋಜಿಸುತ್ತ ಬರುತ್ತಿವೆ. 2018ರಲ್ಲಿ ನೂರು ಶಾಲಾಮಕ್ಕಳ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ಎನ್ನುವ ವಚನ ನೃತ್ಯರೂಪಕದ ಮೂಲಕ ಜನರನ್ನು ಜಾಗೃತಗೊಳಿಸುವ, ವಚನಾಸಕ್ತಿಯನ್ನು ಮೂಡಿಸುವ ಪ್ರಯತ್ನ ನಡೆದಿತ್ತು.

ಈ ಪ್ರದರ್ಶನ ಮುಂಬೈಯಲ್ಲಿ ನಡೆದಾಗ ಅಲ್ಲಿಯ ಪ್ರೇಕ್ಷಕರು ಇದೇ ನೃತ್ಯವನ್ನು ಹಿಂದಿಯಲ್ಲಿ ಮಾಡಿದರೆ ಕನ್ನಡಿಗರೇತರರಿಗೂ ಸುಲಭವಾಗಿ ತಲುಪುತ್ತದೆ ಎನ್ನುವ ಒತ್ತಾಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಬಸವಣ್ಣನವರ 38 ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ   ಹಿಂದಿ ಗಾಯಕರಿಂದ ಹಾಡಿಸಿ ರೆಕಾರ್ಡ್ ಮಾಡಲಾಗಿದೆ.

ಇದರ ಮೊದಲ ಪ್ರಯೋಗ ಮತ್ತು ಉದ್ಘಾಟನೆ ಜುಲೈ 2ರ ಭಾನುವಾರ ಸಂಜೆ 4-30ಕ್ಕೆ ಬೆಂಗಳೂರಿನ `ಕೊಂಡಜ್ಜಿ ಬಸಪ್ಪ ಸಭಾಂಗಣ’ದಲ್ಲಿ ನಡೆಯಲಿದೆ. ಈ ನೃತ್ಯರೂಪಕದ ಉದ್ಘಾಟನೆಯನ್ನು ಮುಖ್ಯಮಂತ್ರಿ   ಸಿದ್ಧರಾಮಯ್ಯ ನೆರವೇರಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ   ಶಿವರಾಜ ತಂಗಡಗಿ  ಅಧ್ಯಕ್ಷತೆ ವಹಿಸಲಿದ್ದಾರೆ.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ  ಎ. ನಾರಾಯಣ ಸ್ವಾಮಿ, ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ. ಬಿ. ಪಾಟೀಲ, ಹೊಸದುರ್ಗ ಶಾಸಕ  ಬಿ. ಜಿ. ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಮತ್ತು ಈ ನೃತ್ಯ ರೂಪಕದ ಪರಿಕಲ್ಪನೆ ಮತ್ತು ಯೋಜನಾ ನಿರ್ದೇಶಕರಾಗಿರುವ ಶ್ರೀನಿವಾಸ ಜಿ ಕಪ್ಪಣ್ಣ  ಉಪಸ್ಥಿತರಿರುತ್ತಾರೆ.

error: Content is protected !!