ಜನರಿಗೀಗ ಆಹಾರ ವಸ್ತುಗಳ ಬೆಲೆ ಏರಿಕೆ ಬಿಸಿ

ಅಕ್ಕಿ, ಬೇಳೆಗಳ ಬೆಲೆ ಹೆಚ್ಚಳ, ಹಾಲಿನ ಬೆಲೆ ಏರಿಕೆಯ ಜೊತೆಗೆ, ಹೋಟೆಲ್‌ ತಿನಿಸು ದರಗಳೂ ಹೆಚ್ಚಾಗುವ ಸಾಧ್ಯತೆ

ದಾವಣಗೆರೆ, ಜೂ. 23 – ಒಂದೆಡೆ ವಾಣಿಜ್ಯೋದ್ಯಮ ಸಂಸ್ಥೆಗಳು ವಿದ್ಯುತ್ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ಜನ ಸಾಮಾನ್ಯರೂ ಸಹ ಬೆಲೆ ಏರಿಕೆಯ ಬಿಸಿ ಎದುರಿಸುವಂತಾಗಿದೆ.

ಕಳೆದ ವಾರದಲ್ಲೇ ಅಕ್ಕಿ ಬೆಲೆ ಮೂರ್ನಾಲ್ಕು ರೂ.ಗಳಷ್ಟು ಹೆಚ್ಚಾಗಿದೆ. ಸಕ್ಕರೆ ಬೆಲೆ ಕೆಜಿಗೆ 38 ರೂ.ಗಳಿಂದ 40 ರೂ.ಗಳಿಗೆ ತಲುಪಿದೆ. ತೊಗರಿ ಬೇಳೆ ಬೆಲೆ ತಿಂಗಳಲ್ಲೇ ಕೆಜಿಗೆ 115 ರೂ.ಗಳಿಂದ 150 ರೂ.ಗಳ ಗಡಿ ದಾಟುತ್ತಿದೆ. 

ಕಳೆದ ಎರಡು ತಿಂಗಳಲ್ಲಿ ಇಳಿಮುಖವಾಗಿದ್ದ ಖಾದ್ಯ ತೈಲದ ಬೆಲೆ, ಒಂದೆರಡು ದಿನಗಳಿಂದ ಮತ್ತೆ ಬಿಸಿ ಮುಟ್ಟಿಸುತ್ತಿದೆ. ಕೈಗಾರಿಕೆಗಳಿಗೆ ಪೂರೈಸುವ ವಿದ್ಯುತ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗಲಿದೆ ಎಂದು ರಾಜ್ಯ ಅಕ್ಕಿ ಗಿರಣಿಗಳ ಮಾಲೀಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಶಿವಕುಮಾರ್ ಹೇಳಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆ, ಅಧಿಕ ವಿದ್ಯುತ್‌ ಶುಲ್ಕಗಳಿಂದ ರಾಜ್ಯದ ಬಹುತೇಕ ಅಕ್ಕಿಗಿರಣಿಗಳು ನಷ್ಟದಲ್ಲಿವೆ. ಈಗ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿರುವುದರಿಂದ ಭತ್ತದ ಹಲ್ಲಿಂಗ್ ದರ ಹಾಗೂ ಅಕ್ಕಿಯ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. 

ಅಕ್ಕಿ ಬೆಲೆ ಕೆಜಿಗೆ ಮೂರರಿಂದ 5 ರೂ.ಗಳವರೆಗೆ ಹೆಚ್ಚಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. 

ಚರ್ಮಗಂಟು ರೋಗದ ಹೊಡೆತದಿಂದಾಗಿ ಹೈನುಗಾರಿಕೆ ವಲಯ ತತ್ತರಿಸಿದೆ. ಇದರಿಂದಾಗಿ ಹಾಲಿನ ಉತ್ಪಾದನೆ ಮೇಲೆ ಪರಿಣಾಮವಾಗಿದೆ. ಸಹಜವಾಗಿಯೇ ಹಾಲಿನ ದರ ಹೆಚ್ಚಾಗುವ ಹಾದಿಯಲ್ಲಿದೆ.

ನಂದಿನಿ ಹಾಲಿನ ಬೆಲೆ 5 ರೂ. ಏರಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಕೆ.ಎ.ಎಫ್. ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.

ವಿದ್ಯುತ್‌ನಿಂದ ಹಿಡಿದು ಅಕ್ಕಿ, ಬೇಳೆಯವರೆಗೆ ಬೆಲೆ ಹೆಚ್ಚಳವಾಗಿರುವುದು ಆಹಾರ ವಲಯದ ಮೇಲೆ ಪರಿಣಾಮ ಬೀರುತ್ತಿದೆ. 

ಹೋಟೆಲ್‌ಗಳೂ ಸಹ ತಿಂಡಿ, ತಿನಿಸುಗಳ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.

ಅಕ್ಕಿ, ತೊಗರಿ ಬೇಳೆ, ಸಕ್ಕರೆ ಸೇರಿದಂತೆ ಹಲವಾರು ಆಹಾರ ವಸ್ತುಗಳ ಬೆಲೆ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಬೆಲೆಗಳು ಇನ್ನಷ್ಟು ಏರಲಿವೆ ಎನ್ನಲಾಗುತ್ತಿದೆ ಎಂದು ಕಿರಾಣಿ ವರ್ತಕ ಕೃಷ್ಣಮೂರ್ತಿ ತಿಳಿಸಿದ್ದಾರೆ.

error: Content is protected !!