ನಾಳೆ ಇಪಿಎಸ್-95 ನಿವೃತ್ತ ಪಿಂಚಣಿದಾರರ ರಾಜ್ಯ ಮಟ್ಟದ ಸಮಾವೇಶ

ದಾವಣಗೆರೆ, ಜೂ.22- ಬೆಂಗಳೂರಿನ ರಾಜಾಜಿ ನಗರದ ಶ್ರೀರಾಮ ಮಂದಿರ ಮೈದಾನದಲ್ಲಿ ನಾಡಿದ್ದು ದಿನಾಂಕ 24ರ ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಸಂಘರ್ಷ ಸಮಿತಿ ಇಪಿಎಸ್-95 ನಿವೃತ್ತ ಪಿಂಚಣಿದಾರರ ರಾಜ್ಯ ಮಟ್ಟದ ಸಮಾವೇಶ ಜರುಗಲಿದೆ.

ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವತ್, ಕಾರ್ಯದರ್ಶಿ ವೀರೇಂದ್ರ ಸಂಗ್ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. 

ನಾವು ಪಿಂಚಣಿದಾರರು ಕಷ್ಟಪಟ್ಟು ದುಡಿದ ಬೆವರಿನ ಸಂಬಳದ ಹಣದಲ್ಲಿ ಶೇ.8.33 ಹಿಡಿದುಕೊಂಡು ಅದಕ್ಕೆ ಅಲ್ಪ ಪ್ರಮಾಣದ  ಭಿಕ್ಷೆಯ ರೂಪದಲ್ಲಿ ಪಿಂಚಣಿ ಇಲಾಖೆಯು 500 ರೂ. 800 ರೂ, 1000 ರೂ. ನೀಡುತ್ತಿದೆ.   ವಿಧವೆಯರಿಗೆ ಅದರ ಅರ್ಧ ಪಿಂಚಣಿ ಕೊಡುತ್ತಿದೆ. ಇದನ್ನು ವಿರೋಧಿಸಿ, ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ನಮ್ಮ ಪರ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನೂ ಸಹ ಪಿಂಚಣಿ ಇಲಾಖೆ ತಿರಸ್ಕರಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಸ್ಪಂದಿಸುತ್ತಿಲ್ಲ. 

ನಮ್ಮಿಂದ ಲಕ್ಷಗಟ್ಟಲೇ ಹಣ ಪಡೆದು, ನಮಗೆ ನೀಡುತ್ತಿರುವ ಪಿಂಚಣಿ ಒಂದು ಸಲದ ಔಷಧಕ್ಕೂ ಸಾಲುತ್ತಿಲ್ಲ. ದೇಶದಲ್ಲಿ 80 ರಿಂದ 85 ಲಕ್ಷ ಪಿಂಚಣಿದಾರರಿದ್ದಾರೆ.

ಈ ಸಮಾವೇಶದಲ್ಲಿ ಜಿಲ್ಲೆಯ ಪಿಂಚಣಿದಾರರು ಆಗಮಿಸುವಂತೆ ಜಿಲ್ಲಾ ಸಮಿತಿ ಸಂಯೋಜಕ ಎಂ.ಶಾಂತಪ್ಪ, ಕೆ.ಎಂ.ಮರುಳಸಿದ್ದಯ್ಯ, ಟಿ.ಎಂ.ವಿಶ್ವನಾಥಯ್ಯ ತೌಡೂರು, ನಾರಾಯಣ ಸಿಂಧೆ, ಟಿ.ಮಂಜುನಾಥ ಪುಟಗನಾಳ್, ಪಿ.ರಾಜಾಸಾಬ್ ಮತ್ತು ಕೆ.ಎಸ್.ಪಾಟೀಲ್ ಕೋರಿದ್ದಾರೆ.

error: Content is protected !!