ದಾವಣಗೆರೆ,ಜೂ.4- ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ `ಮಹಲಿಂಗ ರಂಗ’ ಪ್ರಶಸ್ತಿಗೆ ಹಿರಿಯ ಪತ್ರಕರ್ತರೂ, ಸಾಹಿತಿಯೂ ಆದ ಬಾ.ಮ. ಬಸವರಾಜಯ್ಯ ಮತ್ತು ಹಿರಿಯ ಸಾಹಿತಿ ಕೆ.ಎನ್. ಸ್ವಾಮಿ ಭಾಜನರಾಗಿದ್ದಾರೆ. 2022ನೇ ಸಾಲಿನ `ಮಹಲಿಂಗ ರಂಗ’ ಪ್ರಶಸ್ತಿಗೆ ಬಾ.ಮ. ಬಸವರಾಜಯ್ಯ ಹಾಗೂ 2023ನೇ ಸಾಲಿನ `ಮಹಲಿಂಗ ರಂಗ’ ಪ್ರಶಸ್ತಿಗೆ ಕೆ.ಎನ್. ಸ್ವಾಮಿ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ. ಹೋಟೆಲ್ ಉದ್ಯಮಿಗಳೂ, ದಾನಿಗಳೂ ಆಗಿದ್ದ ಕೀರ್ತಿ ಶೇಷ ಶ್ರೀ ಮೋತಿ ರಾಮರಾವ್ ಹೆಸರಿನಲ್ಲಿರುವ ಶ್ರೀ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಮಹಲಿಂಗ ರಂಗ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
December 28, 2024