ಸರ್ಕಾರಿ ಬಸ್‌ಗಳಿಗೆ ಬೇಡಿಕೆ

ಸರ್ಕಾರಿ ಬಸ್‌ಗಳಿಗೆ ಬೇಡಿಕೆ

ದಾವಣಗೆರೆ ವಿಭಾಗದ 300ಕ್ಕೂ ಹೆಚ್ಚು ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ

ದಾವಣಗೆರೆ, ಜೂ. 3 – ಬರುವ ಜೂನ್ 11ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸಾರಿಗೆ ನಿಗಮವು ಎಲ್ಲಾ ವಿಭಾಗಗಳಿಂದ ಮಾಹಿತಿ ಪಡೆದಿದೆ.

ಉಚಿತ ಸೇವೆಯ ಹಿನ್ನೆಲೆಯಲ್ಲಿ ಇದುವರೆಗೂ ರೈಲು ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದ ಸಾಕಷ್ಟು ಜನರು ಸರ್ಕಾರಿ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಪರಿಸ್ಥಿತಿ ನಿಭಾಯಿಸುವ ಕುರಿತು ಶುಕ್ರವಾರ ಸಭೆಯೊಂದನ್ನು ನಡೆಸಲಾಗಿದೆ.

ನಗರ ಸ್ಥಳೀಯ ಬಸ್‌ಗಳಲ್ಲೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ಹೆಚ್ಚಾಗಬಹುದಾದ ಬೇಡಿಕೆಯನ್ನು ಪರಿಗಣಿಸಿ, ಅಗತ್ಯವಾದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಕೆ.ಎಸ್.ಆರ್.ಟಿ.ಸಿ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಕ ಸಿ.ಇ. ಶ್ರೀನಿವಾಸ ಮೂರ್ತಿ, ದಾವಣಗೆರೆ ವಿಭಾಗದಲ್ಲಿ 368 ಬಸ್‌ಗಳಿವೆ. ಇವುಗಳಲ್ಲಿ 63 ಎ.ಸಿ. ಹಾಗೂ ಸ್ಲೀಪರ್ ದರ್ಜೆಯವು. ಉಳಿದ 305 ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಪಡೆಯಲಿದ್ದಾರೆ ಎಂದು ಹೇಳಿದರು.

58 ನಗರ ಸ್ಥಳೀಯ ಬಸ್‌ಗಳಿವೆ. ಇವುಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಇರಲಿದೆ. ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಪರಿಸ್ಥಿತಿಯ ಕುರಿತು ನಿಗಮದ ಉನ್ನತ ಅಧಿಕಾರಿಗಳು ವಿವರ ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಪರಿಗಣಿಸಿ ಹೆಚ್ಚುವರಿ ಬಸ್‌ಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ವಿಭಾಗದಲ್ಲಿ ಪ್ರತಿನಿತ್ಯ 1 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಇವರ ಪೈಕಿ ಶೇ.40ಕ್ಕೂ ಹೆಚ್ಚು ಮಹಿಳೆಯರಿದ್ದಾರೆ ಎಂದು ಅಂದಾಜಿಸಲಾಗಿದೆ. 27 ಸಾವಿರ ವಿದ್ಯಾರ್ಥಿಗಳ ಪಾಸ್‌ಗಳಿದ್ದು, ಇವರಲ್ಲಿ ಅರ್ಧದಷ್ಟು ವಿದ್ಯಾರ್ಥಿನಿಯರಿದ್ದಾರೆ.

ಬಸ್‌ಗಳಲ್ಲಿ ಪ್ರಯಾಣ ಉಚಿತವಿದ್ದರೂ ಸಹ, ಎಲ್ಲ ಮಹಿಳೆಯರೂ ಸರ್ಕಾರಿ ಬಸ್‌ಗಳಿಗೇ ಬರುತ್ತಾರೆ ಎಂದು ಹೇಳಲಾಗದು. ಪ್ರಯಾಣದ ಅನುಕೂಲಕ್ಕೆ ತಕ್ಕ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಎಷ್ಟು ಹೆಚ್ಚಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಚಿತ ಬಸ್‌ ಪಾಸ್‌ಗಳಿಗೆ ಸರ್ಕಾರವೇ ಹಣ ಭರಿಸುತ್ತಿದೆ. ಅದೇ ರೀತಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೂ ಸರ್ಕಾರ ಹಣ ನೀಡಲಿದೆ. ಹೀಗಾಗಿ ನಿಗಮದ ಆರ್ಥಿಕ ಪರಿಸ್ಥಿತಿ ಈಗಿನಂತೆಯೇ ಮುಂದುವರೆಯಲಿದೆ ಎಂಬುದು ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ.

error: Content is protected !!