ಸೋಲಿನ ಹತಾಶೆಯಿಂದ ಬಿಜೆಪಿ-ಜೆಡಿಎಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ : ಎಸ್.ರಾಮಪ್ಪ

ಸೋಲಿನ ಹತಾಶೆಯಿಂದ ಬಿಜೆಪಿ-ಜೆಡಿಎಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ : ಎಸ್.ರಾಮಪ್ಪ - Janathavaniದಾವಣಗೆರೆ, ಮೇ 30- ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಿಸಲಾಗಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಬದ್ಧವಾಗಿದೆ. ಆದರೆ ಅದಕ್ಕಾಗಿ 15 ದಿನಗಳ ಕಾಲಾವಕಾಶ ಬೇಕಿದೆ ಎಂದು ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಹತಾಶೆಯಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಾ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆಯೂ ಕಾಂಗ್ರೆಸ್ ತಾನು ಘೋಷಿಸಿದ ಪ್ರಣಾಳಿಕೆಗಳಲ್ಲಿ ಬಹುತೇಕ ಎಲ್ಲವನ್ನೂ ಈಡೇರಿಸಿದೆ. ಕೊಟ್ಟ ಮಾತಿಗೆ ತಪ್ಪುವ ಪಕ್ಷ ನಮ್ಮದಲ್ಲ. ಈ ಬಾರಿಯೂ ಘೋಷಿಸಲಾಗಿರುವ ಐದೂ ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಈಡೇರಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. 15 ರೂಪಾಯಿ ಸಹ ಬಂದಿಲ್ಲ. ಬಿಜೆಪಿ ಮುಖಂಡರದ್ದು ಬರೀ ಸುಳ್ಳು ಆಶ್ವಾಸನೆಗಳು ಎಂದು ಹೇಳಿದರು. 

ಎಂಎಲ್‌ಸಿ ಸ್ಥಾನಕ್ಕೆ ಬೇಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಟಿಕೆಟ್  ನೀಡುವಲ್ಲಿ ನನಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದೇನೆ. ನನಗೆ ವಿಧಾನಪರಿಷತ್ ಸ್ಥಾನ ನೀಡುವಂತೆಯೂ ಮನವಿ ಮಾಡಿದ್ದೇನೆ. ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

ಪಂಚಮಸಾಲಿ ಶ್ರೀಗಳ ಹಾಗೂ ಕಾಗಿನೆಲೆ ಸ್ವಾಮೀಜಿಗಳು ನನಗೆ ಟಿಕೆಟ್ ಕೊಡದಂತೆ ಪತ್ರ ಬರೆದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಒಟ್ಟಿನಲ್ಲಿ ನನಗೆ ಟಿಕೆಟ್ ಕೈ ತಪ್ಪಲು ಕಾಣದ ಕೈಗಳು ಕೈವಾಡ ಮಾಡಿವೆ. ನಾನು ಸ್ಪರ್ಧಿಸಿದ್ದರೆ 25 ಸಾವಿರ ಮತಗಳ ಅಂತರದಿಂದ ಜಯ ಗಳಿಸುತ್ತಿದ್ದೆ ಎಂದರು.

ಹರಿಹರ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹಲವು ಸಮೀಕ್ಷೆಗಳೂ ಸಹ ನಾನು ಗೆಲ್ಲುವುದಾಗಿ ಹೇಳಿದ್ದವು. ಕಾಂಗ್ರೆಸ್ ಹೈಕಮಾಂಡ್ ಸಹ ನನಗೆ ಟಿಕೆಟ್ ನೀಡುವ ವಿಚಾರದಲ್ಲಿ ಮೈಮರೆತಂತೆ ಕಾಣುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ಜಿಲ್ಲಾ ವಕ್ತಾರ ಎಂ.ನಾಗೇಂದ್ರಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮುರುಗೇಶಪ್ಪ, ಶಶಿರೆಡ್ಡಿ, ಜಿ.ಕೃಷ್ಣಮೂರ್ತಿ, ಅಬ್ದುಲ್, ರೆಹಮಾನ್ ಖಾನ್ ಗಣೇಶ್ ಮೆಹರ್ವಾಡೆ ಇತರರು ಉಪಸ್ಥಿತರಿದ್ದರು.

error: Content is protected !!