ಹಕ್ಕಿಪಿಕ್ಕಿ ಜನಾಂಗಕ್ಕೆ ಸೂಕ್ತ ಸೌಲಭ್ಯ ನೀಡಲು ಒತ್ತಾಯ

ದಾವಣಗೆರೆ, ಮೇ 2- ನಮ್ಮ ಸರ್ಕಾರಗಳು ರಾಜ್ಯದಲ್ಲಿ ನೆಲೆಸಿರುವ ಹಕ್ಕಿಪಿಕ್ಕಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತಿಲ್ಲ. ಸಮುದಾಯದ ಜನರಿಗೆ ಉಳುಮೆ ಮಾಡಲು ಭೂಮಿ, ನಿವೇಶನ ಹಕ್ಕುಪತ್ರ ನೀಡುವ ಜತೆಗೆ, ನಮ್ಮ ವೃತ್ತಿಗಳಿಗೆ ಸಂಬಂಧಿಸಿದ ಪರವಾನಗಿ ನೀಡಬೇಕು ಎಂದು ಕರ್ನಾಟಕ ಹಕ್ಕಿಪಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಆರ್. ಪುನೀತ್‌ಕುಮಾರ್ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಡಾನ್‌ನಿಂದ ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತವಾಗಿ ತವರಿಗೆ ಕರೆತಂದ ಭಾರತ ಸರ್ಕಾರ, ರಾಯಭಾರ ಕಚೇರಿ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.

ವ್ಯಾಪಾರ ಉದ್ದೇಶದಿಂದ ದಾವಣಗೆರೆ, ಶಿವಮೊಗ್ಗ ಸೇರಿ ರಾಜ್ಯದ ನಾನಾ ಭಾಗಗಳಿಂದ ಹಕ್ಕಿಪಿಕ್ಕಿ ಸಮುದಾಯದ 800ಕ್ಕೂ ಹೆಚ್ಚು ಮಂದಿ ಸುಡಾನ್‌ಗೆ ತೆರಳಿದ್ದರು. ಆದರೆ, ಕಳೆದ 20 ದಿನಗಳಿಂದ ಸುಡಾನ್‌ನಲ್ಲಿ ಯುದ್ಧ ನಡೆಯುತ್ತಿದೆ. ಇದರಿಂದ ಎಲ್ಲರೂ ಭಯಭೀತರಾಗಿದ್ದರು. ಈಗ ನೂರಾರು ಮಂದಿ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಇನ್ನೂ ಹೆಚ್ಚು ಮಂದಿ ಬರಲಿದ್ದಾರೆ ಎಂದರು.

ಸುಡಾನ್‌ನಿಂದ ಮರಳಿದ ನಂದಕುಮಾರ್ ಮಾತನಾಡಿ,  ಅಲ್ಲಿ ಇದ್ದಕ್ಕಿದ್ದಂತೆ ಯುದ್ಧ ಆರಂಭವಾಯಿತು. ಮೊದಲು ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಬಳಿಕ ರಾಜಧಾನಿ ಖಾರ್ತೂಮ್‌ನಲ್ಲಿ ಗಲಭೆ ಶುರುವಾಯಿತು. 

20 ದಿನಗಳಲ್ಲಿ ಸಾವಿರಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದರು. ದಿನಸಿ ತರಲು ಹೊರಗೆ ಹೋದ ಭಾರತೀಯರನ್ನು ಕೆಲವರು ಬೆದರಿಸಿ ಹಣ, ಮೊಬೈಲ್ ಕಸಿದುಕೊಂಡ ಘಟನೆಗಳೂ ನಡೆದವು ಎಂದು ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸುಡಾನ್‌ನಿಂದ ಮರಳಿದ ಯುವಕ ಭವಾನಿ, ಬಿ. ಸಾವಂತ್, ಗೋಪನಾಳ್ ನಿವಾಸಿ ಭಾಸ್ಕರ್ ಇದ್ದರು.

error: Content is protected !!