ಜಿಲ್ಲೆಯ ಫಲಿತಾಂಶದಲ್ಲಿ ಹೆಚ್ಚಳ, ರಾಜ್ಯಮಟ್ಟದಲ್ಲಿ 2 ಸ್ಥಾನ ಕುಸಿತ
ವಿಜ್ಞಾನ ವಿಭಾಗದಲ್ಲಿ ಮಾಗನೂರು ಬಸಪ್ಪ ಕಾಲೇಜಿನ ಪೂಜಾ ಬಿ. ಜಿಲ್ಲೆಗೆ ಪ್ರಥಮರಾಗಿದ್ದಾರೆ. ಇವರು 600ಕ್ಕೆ 591 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸರ್.ಎಂ.ವಿ. ಪಿಯು ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರೀತಿ ಯು. ಅವರು 600ಕ್ಕೆ 590 ಅಂಕ ಗಳಿಸಿ, ದಾವಣಗೆರೆ ಜಿಲ್ಲೆಗೆ ಪ್ರಥಮರಾಗಿದ್ದಾರೆ.
ದಾವಣಗೆರೆ, ಏ.21- ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ. 72.62ರಷ್ಟು ಫಲಿತಾಂಶ ಲಭಿಸಿದೆ. ಈ ಮೂಲಕ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದೆ.
2020 ರಲ್ಲಿ ಜಿಲ್ಲೆ 19ನೇ ಸ್ಥಾನದಲ್ಲಿತ್ತು. 2021ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಉತ್ತೀರ್ಣ ಮಾಡಲಾಗಿತ್ತು. 2022ರಲ್ಲೂ 62.72ರಷ್ಟ ಫಲಿತಾಂಶ ಪಡೆದು ಜಿಲ್ಲೆ 19ನೇ ಸ್ಥಾನ ಪಡೆದಿತ್ತು.
ಈ ವರ್ಷ ಫಲಿತಾಂಶದಲ್ಲಿ ಏರಿಕೆ ಕಂಡಿದೆಯಾದರೂ, 21ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆ ಎರಡು ಸ್ಥಾನ ಹಿಂದಕ್ಕೆ ಸರಿದಿದೆ.
ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 19,654 ವಿದ್ಯಾರ್ಥಿಗಳಲ್ಲಿ 14,272 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾವಿಭಾಗದಲ್ಲಿ ಶೇ.52.61, ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಶೇ.69.92, ವಿಜ್ಞಾನ ವಿಭಾಗದಲ್ಲಿ ಶೇ.85.63ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚು ಫಲಿತಾಂಶ ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ.
ನಗರ ಮಟ್ಟದಲ್ಲಿ ಶೇ.73.15ರಷ್ಟು ಫಲಿತಾಂಶ ಬಂದಿದ್ದರೆ, ಗ್ರಾಮೀಣ ಮಟ್ಟದಲ್ಲಿ ಶೇ.70.35ರಷ್ಟು ಫಲಿತಾಂಶ ಬಂದಿದೆ.
ಇನ್ನೂ ಬಾಲಕರು ಶೇ.66.56ರಷ್ಟು ಫಲಿತಾಂಶ ಪಡೆದರೆ, ಬಾಲಕಿಯರು ಶೇ.78.15ರಷ್ಟು ಫಲಿತಾಂಶ ಪಡೆದು ಮುಂಚೂಣಿಯಲ್ಲಿದ್ದಾರೆ.
ಈ ವರ್ಷ ಶೇ.75.72ರಷ್ಟು ಫಲಿತಾಂಶ ಪಡೆದು 21ನೇ ಸ್ಥಾನದಲ್ಲಿದ್ದರೆ, ಕಳೆದ ವರ್ಷ ಶೇ.62.72ರಷ್ಟು ಫಲಿತಾಂಶ ಬಂದಿತ್ತು.