ಉಕ್ಕಡಗಾತ್ರಿ: ಹರಿಹರ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರೊ. ಭಿಕ್ಷಾವರ್ತಿಮಠ ಬೇಸರ
ಉಕ್ಕಡಗಾತ್ರಿ, ಮಾ. 26- ಇಂಗ್ಲಿಷ್ ಕಲಿಯಿರಿ, ಆದರೆ ಇಂಗ್ಲಿಷ್ ಸಂಸ್ಕೃತಿ ಬಳಸಬೇಡಿ. ಇಂಗ್ಲಿಷ್ ಸಂಸ್ಕೃತಿಯನ್ನು ಪಾದರಕ್ಷೆ ಬಿಡುವ ಸ್ಥಳದಲ್ಲೇ ಬಿಟ್ಟು ಕನ್ನಡದ ಮನೆಯೊಳಗೆ ಬನ್ನಿ ಎಂದು ಹರಿಹರದ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಹೇಳಿದರು.
ಸುಕ್ಷೇತ್ರ ಉಕ್ಕಡಗಾತ್ರಿಯ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ಆವರಣದಲ್ಲಿ ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಹರಿಹರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಇಂಗ್ಲಿಷ್ ಗುಲಾಮಗಿರಿಯಿಂದ ನಮ್ಮ ನಾಡು, ಭಾಷೆ ಹಾಗೂ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಭಿಕ್ಷಾವರ್ತಿಮಠ, ಗುಡ್ ಮಾರ್ನಿಂಗ್, ಮಮ್ಮಿ, ಡ್ಯಾಡಿ ನಮ್ಮ ಸಂಸ್ಕೃತಿಯಲ್ಲ. ನಮಸ್ಕಾರ, ಕ್ಷೇಮವೇ, ಅಮ್ಮ, ಅಪ್ಪ ಎಂಬ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿ ಎಂದು ಪೋಷಕರಿಗೆ ಕರೆ ನೀಡಿದರು.
ಕನ್ನಡ ಭಾಷೆಯಲ್ಲೇ ಸಂಸ್ಕೃತಿ ಇದೆ. ಜಗತ್ತಿನಲ್ಲಿ ಕನ್ನಡ ಭಾಷೆ, ಸಾಹಿತ್ಯಕ್ಕೆ ಇರುವ ವಿಶೇಷ ಗೌರವ ಬೇರೆ ಯಾವ ಭಾಷೆಗೂ ಇಲ್ಲ. 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಹಾಗೂ ಅಕ್ಷರಗಳನ್ನು ಮನೆಯಿಂದಲೇ ಹೆಚ್ಚು ಬಳಸುವಂತಾಗಬೇಕೆಂದರು.
ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಕನ್ನಡ ಇವತ್ತು ಶೋಚನೀಯ ಸ್ಥಿತಿಗೆ ಬರಲು ಕಾರಣವಾಗಿದ್ದು, ದೇಶದಲ್ಲಿ ಹಿಂದಿ-ಇಂಗ್ಲಿಷ್ಗೆ ಇರುವ ಮಾನ್ಯತೆ ಕನ್ನಡಕ್ಕೆ ಯಾಕಿಲ್ಲ ಎಂದು ಭಿಕ್ಷಾವರ್ತಿಮಠ ಪ್ರಶ್ನಿಸಿದರು.
ಇದೊಂದು ಚಿಂತನಾ ಸಮಾವೇಶ. ಇಲ್ಲಿ ಕವಿಗಳು ತಮ್ಮ ಕವಿತೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಬರವಣಿಗೆ ಜೀವಮುಖಿ ಮತ್ತು ಜನಪರವಾಗಿರಬೇಕು ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದ ಭಿಕ್ಷಾವರ್ತಿಮಠ ಅವರು, ಕನ್ನಡದ ಅಭಿರುಚಿ, ಸಾಹಿತ್ಯದ ಅಭಿರುಚಿಯನ್ನು ಇಂತಹ ಸಮ್ಮೇಳನಗಳ ಮೂಲಕ ಜನರಲ್ಲಿ ಬೆಳೆಸುವ ಅಗತ್ಯತೆ ಹೆಚ್ಚಾಗಿದೆ ಎಂದರು.
ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಲೇಖಕ ಮಹಾಂತೇಶ್ ನಿಟ್ಟೂರು, ಪ್ರಕಾಶ ಕೋಳೂರು, ಕೃಷ್ಣಮೂರ್ತಿ ಶ್ರೇಷ್ಠಿ, ಬೀದಿ ನಾಟಕ ಕಲಾವಿದರಾದ ಜಿಗಳಿ ರಂಗನಾಥ್, ಹೊಳೆಸಿರಿಗೆರೆ ಎಂ. ಶಿವಕುಮಾರ್, ಶ್ರೀಮತಿ ಸುಜಾತ ಗೋಪಿನಾಥ್, ಹಿರಿಯರಾದ ಗೋವಿನಾಳ್ ಮಲ್ಲನಗೌಡ್ರು, ನಿವೃತ್ತ ಶಿಕ್ಷಕರಾದ ಹಿಂಡಸಘಟ್ಟದ ಸಿದ್ಧನಗೌಡ್ರು, ಭಾನುವಳ್ಳಿ ಪುಟ್ಟಪ್ಪ, ಕೆ.ಟಿ. ಶಿವಾನಂದಪ್ಪ, ಎ.ಡಿ. ಕೊಟ್ರಬಸಪ್ಪ, ಹೆಚ್.ಜಿ. ಚಕ್ರಸಾಲಿ, ಮುದ್ದೇರ ಹನುಮಂತಪ್ಪ, ಪತ್ರಕರ್ತ ಪಂಚಾಕ್ಷರಿ, ಕೆ. ಜೈಮುನಿ, ಸುಬ್ರಹ್ಮಣ್ಯ ನಾಡಿಗೇರ್, ವಾಸವಿ ರಮೇಶ್, ಎನ್.ಬಿ. ಲೀಲಾ, ಕಮಲಾಪುರ ಪಂಚಾಕ್ಷರಿ, ನಾಗರಾಜ್ ಮೆಹರ್ವಾಡೆ, ಯುವ ಕಲಾವಿದ ಅಜೇಯ್, ಹಾಲಿವಾಣದ ಟಿ. ಕರಿಯಪ್ಪ ಸೇರಿದಂತೆ ಇನ್ನೂ ಅನೇಕರನ್ನು ಗೌರವಿಸಲಾಯಿತು.
ಜಿ.ಪಂ. ಮಾಜಿ ಸದಸ್ಯರಾದ ಎಂ. ನಾಗೇಂದ್ರಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಹಿರಿಯ ಸಾಹಿತಿ ಜೆ. ಕಲೀಂಬಾಷಾ, ಜೆಡಿಎಸ್ ಮುಖಂಡ ಸಿರಿಗೆರೆ ಪರಮೇಶ್ವರಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮುಖಂಡ ಸಿ.ಎನ್. ಹುಲಿಗೇಶ್, ತಾ. ಜೆಡಿಎಸ್ ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ವಾಸನದ ಎಸ್.ಕೆ. ಬಸವರಾಜ್, ಶ್ರೀ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್, ತಾ. ಪತ್ರಕರ್ತರ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂಭವಿ ಡಿ.ಜಿ. ನಾಗರಾಜ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ಧಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಹಿಂಡಸಘಟ್ಟ ತಿಪ್ಪೇಸ್ವಾಮಿ, ಶಿಕ್ಷಕ ಜಿ.ಆರ್. ನಾಗರಾಜ್, ನಿವೃತ್ತ ಯೋಧ ಸಿರಿಗೆರೆ ಪರಶುರಾಮ್, ಕುಂಬಳೂರು ವಾಸು, ಮೆಡಿಕಲ್ ಶಾಪ್ ರಾಜೀವ್ ನಂದಿಗಾವಿ, ತಾ ಕಸಾಪ ಕಾರ್ಯದರ್ಶಿಗಳಾದ ಡಿ.ಡಿ. ರೇವಣನಾಯ್ಕ, ಚಿದಾನಂದ್ ಕಂಚಿಕೇರಿ, ಜಿಲ್ಲಾ ಕಸಾಪ ಸದಸ್ಯ ರಿಯಾಜ್ ಅಹಮದ್, ಮಲೇಬೆನ್ನೂರು ಹೋಬಳಿ ಕಸಾಪ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಚಂದ್ರಶೇಖರ್, ಮಂಜು ದೊಡ್ಡಮನಿ ಮತ್ತಿತರರು ಭಾಗವಹಿಸಿದ್ದರು.