10 ಬಿಜೆಪಿ ಶಾಸಕರ ಬೇನಾಮಿ ಹಣದಿಂದ ರೈತರ ಕೃಷಿ ಸಾಲ ಮನ್ನಾ ಮಾಡಬಹುದು

10 ಬಿಜೆಪಿ ಶಾಸಕರ ಬೇನಾಮಿ ಹಣದಿಂದ  ರೈತರ ಕೃಷಿ ಸಾಲ ಮನ್ನಾ ಮಾಡಬಹುದು

ರೈತ ಆತ್ಮಹತ್ಯೆ ಪ್ರತಿಭಟನೆಯಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ

ರಾಣೇಬೆನ್ನೂರು, ಮಾ.6 – ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಶಾಸಕರದ್ದೂ ಇದೇ  ಮಾಡಾಳು ವಿರುಪಾಕ್ಷಪ್ಪರಂತೆ ಬ್ರಹ್ಮಾಂಡ ಭ್ರಷ್ಟಾಚಾರ,  ಕೇವಲ ಹತ್ತು  ಬಿಜೆಪಿ ಶಾಸಕರ ಮನೆ ಮೇಲೆ ಲೋಕಾಯುಕ್ತ ಸಂಸ್ಥೆ ದಾಳಿ ನಡೆಸಿದರೆ ಈ ರಾಜ್ಯದ ರೈತರ ಕೃಷಿ ಸಾಲ ಮನ್ನಾ ಮಾಡಲು ಬೇಕಾದಷ್ಟು ಬೇನಾಮಿ ಹಣ ಸಿಗುತ್ತದೆ ಎಂದು ರೈತ ಮುಖಂಡ ರವೀಂದ್ರ ಗೌಡ ಎಫ್. ಪಾಟೀಲ ಆರೋಪಿದರು.

ಕಳೆದ  10  ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಾನು ಬೆಳೆದ ಬೆಳೆಗೆ ವೈಜ್ಞಾನಿಕ ಮಾದರಿಯಲ್ಲಿ ಬೆಲೆ ಸಿಗದೇ ಇದ್ದುದರಿಂದ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಮಾನ, ಮರ್ಯಾದೆಗೆ ಅಂಜಿ ರೈತಾಪಿ ವರ್ಗ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಕಣ್ಣು, ಕಿವಿ, ಮೂಗು ಇಲ್ಲದಂತೆ ವರ್ತಿಸುತ್ತಿದೆ ಎಂದು  ಅವರು ದೂರಿದರು.

 ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂದೆ ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ರೈತ ನಾಗಪ್ಪ ನಿಂಗಪ್ಪ (60)  ಎಂಬಾತ   ತಾನು ಮಾಡಿದ ಕೃಷಿ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು, ಆತನ ಶವವಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಕೃಷಿ ಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆಗೆ ಕೊನೆ ಯಾವಾಗ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಐರಣಿ, ಮಂಜಪ್ಪ ಹುಣಸಿಕಟ್ಟಿ, ದುಗ್ಗೇಶ ಹರಿಜನ, ಮಲ್ಲೇಶ ಕೂಡಲಪ್ಪನವರ, ಹರಿಹರಗೌಡ ಪಾಟೀಲ, ಪ್ರಶಾಂತ ರೆಡ್ಡಿ ಎರೇಕುಪ್ಪಿ, ಇಕ್ಬಾಲ್‍ಸಾಬ್ ರಾಣೇಬೆ ನ್ನೂರು, ಸುರೇಶ ಭಾನುವಳ್ಳಿ ಮುಂತಾದ ರೈತ ಮುಖಂಡರು ಆಗಮಿಸಿದ್ದರು. 

ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಯುವ ಮುಖಂಡ ಚಂದ್ರಣ್ಣ ಬೇಡರ ಆಗಮಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

error: Content is protected !!