ದಾವಣಗೆರೆ, ಮಾ. 5- ವನಿತಾ ಸಮಾಜದ ವಾರ್ಷಿಕೋತ್ಸವದ ಅಂಗವಾಗಿ ವನಿತಾ ಸಮಾಜದ ಅಂಗ ಸಂಸ್ಥೆಗಳಾದ ವೈದ್ಯ ವೇದಿಕೆ ಹಾಗೂ ವಿಹ ಪರಿಸರ ವೇದಿಕೆ ವತಿಯಿಂದ ಭಾನುವಾರ ಸಂಜೆ `ಸೀರೆ ಉಡುಗೆಯಲ್ಲಿ ನಡಿಗೆ’ ಜಾಥಾ ನಡೆಯಿತು.
ವನಿತಾ ಸಮಾಜದಲ್ಲಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರೂ, ಕಸ-ರಸ ಅಭಿಯಾನದ ರೂವಾರಿಗಳೂ ಆಗಿರುವ ಡಾ.ಶಾಂತಾಭಟ್, ನಡಿಗೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಹಾಗೂ ಪರಿಸರಕ್ಕೆ ನಾವು ನೀಡುವ ಕೊಡುಗೆಗಳ ಬಗ್ಗೆ ವಿವರಿಸಿದರು.
ವನಿತಾ ಸಮಾಜದಿಂದ ಆರಂಭವಾದ ಜಾಥಾದಲ್ಲಿ `ಪರಿಸರದ ನಾಶ ಮನುಕುಲದ ಸರ್ವನಾಶ’, `ನಡೆ ನಡೆ ನಡೆ ಬಿಪಿ ಶುಗರ್ ತಡೆ’, `ಪರಿಶುದ್ಧ ಗಾಳಿ ಆರೋಗ್ಯವಂತರಾಗಿ ಬಾಳಿ’, `ಪ್ರಕೃತಿಯ ರಕ್ಷಕ ಪರಿಸರದ ಮಾಲೀಕ’, `ಮಲಗುವವನು ರೋಗಿ ನಡೆಯುವವನು ಯೋಗಿ’ ಮೊದಲಾದ ಘೋಷಣೆಗಳನ್ನು ಕೂಗಲಾಯಿತು.
ಮಾರ್ಗ ಮಧ್ಯೆ ಇದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರ ನಿವಾಸಕ್ಕೆ ತೆರಳಿದಾಗ, ಅವರು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್, ನಳಿನಿ ಅಚ್ಯುತ್, ನಾಗರತ್ನ ಜಗದೀಶ್, ಡಾ.ಚೈತಾಲಿ, ಡಾ.ಪೂರ್ಣಿಮ, ಸೌಮ್ಯ ಸತೀಶ್ ಸೇರಿದಂತೆ ವನಿತಾ ಸಮಾಜ ಹಾಗೂ ಅಂಗ ಸಂಸ್ಥೆಗಳ ಪದಾಧಿ ಕಾರಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.