ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಮಂಡನೆ

ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಮಂಡನೆ

ಚನ್ನಗಿರಿ, ಮಾ. 5-  ಹರನಹಳ್ಳಿ-ಕೆಂಗಾಪುರದಲ್ಲಿ ನಡೆದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಆರು ನಿರ್ಣಯಗಳನ್ನು ಮಂಡಿಸಿದರು.

2023-24 ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ಈ ವರ್ಷವೇ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಣೆ ಮಾಡಿರುವುದಕ್ಕೆ ಜಿಲ್ಲಾ ಕಸಾಪ ಹಾಗೂ ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿ ಗಳ ವತಿಯಿಂದ ಅಭಿನಂದಿಸುವ ಮೂಲಕ ಈ ನಿಟ್ಟಿನಲ್ಲಿ ಶೀಘ್ರವೇ ವಿಶೇಷ ಅಧಿಕಾರಿಯನ್ನು ನೇಮಿಸುವಂತೆ  ಸರ್ಕಾರವನ್ನು ಸಮ್ಮೇಳನ ಆಗ್ರಹಿಸಿತು.

ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಹಂತಗಳ ಸರ್ಕಾರಿ ಉದ್ಯೋಗದಲ್ಲಿ  ಮೀಸಲಾತಿ ಕಲ್ಪಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆ ಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

ದಾವಣಗೆರೆ ಜಿಲ್ಲೆಯನ್ನು ಹಾಗೂ ವಿಶೇಷವಾಗಿ ಚನ್ನಗಿರಿ ತಾಲ್ಲೂಕನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಸುವ ನಿಟ್ಟಿನಲ್ಲಿ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ, ಸಂತೇಬೆನ್ನೂರಿನ ಪುಷ್ಕರಣಿ, ಕೆಳದಿ ಚನ್ನಮ್ಮ ಕೋಟೆ, ಹೊದಿಗೆರೆಯ ಷಹಜಿ ರಾಜೇ ಬೊಸ್ಲೆರವರ (ಶಿವಾಜಿ ಮಹಾರಾಜರ ತಂದೆ) ಸಮಾಧಿ ಸ್ಥಳ ಮುಂತಾದ ಸ್ಥಳಗಳು ಇನ್ನಷ್ಟು ಪ್ರವಾಸಿಗ ರನ್ನು ಆಕರ್ಷಿಸುವ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಅದರಲ್ಲೂ ವಿಶೇಷ ವಾಗಿ ಸಂತೇಬೆನ್ನೂರಿನ ಪುಷ್ಕರಣಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯ, ಉದ್ಯಾನವನದ ಅಭಿವೃದ್ಧಿ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಕೆಲಸವಾಗಬೇಕು.

ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು.

ದಾವಣಗೆರೆ ಜಿಲ್ಲೆಯಾಗಿ 25 ಸಂವತ್ಸರಗಳನ್ನು ಪೂರೈಸಿ ರಜತ ಸಂಭ್ರಮದಲ್ಲಿರುವ ಈ ಸಮಯದಲ್ಲಿ ಜಿಲ್ಲೆಯ ಎಲ್ಲಾ ಹಿರಿಯ, ಕಿರಿಯ ಸಾಹಿತಿಗಳನ್ನು ಒಳಗೊಂಡ ವಿಶೇಷ ಸಾಹಿತ್ಯ ಕಾರ್ಯಕ್ರಮವನ್ನು ಜಿಲ್ಲಾಡಳಿತವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿ ಜಿಲ್ಲೆಯ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. 

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ನಿರ್ಣಯ ಮಂಡಿಸಿದರು. ಗೌರವ ಕಾರ್ಯದರ್ಶಿ ಬಿ. ದಿಳ್ಳೆಪ್ಪ, ಗೌರವ ಕಾರ್ಯದರ್ಶಿ ರೇವಣಸಿದ್ಧಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಗದೀಶ್ ಕೂಲಂಬಿ, ಸಹ ಕಾರ್ಯದರ್ಶಿ ಕೆ.ಎಸ್. ವೀರೇಶ  ಪ್ರಸಾದ್, ತಾಲ್ಲೂಕು ಅಧ್ಯಕ್ಷರಾದ ಎ.ಜಿ. ಸುಮತಿ ಜಯ್ಯಪ್ಪ, ಎಲ್.ಜಿ. ಮಧುಕುಮಾರ್,
ಡಿ.ಎಂ. ಹಾಲಾರಾಧ್ಯ, ಡಿ.ಎಂ. ಮಂಜುನಾಥಯ್ಯ, ಜಿ. ಮುರುಗೆಪ್ಪಗೌಡ, ಕೆ. ಸುಜಾತಮ್ಮ ಉಪಸ್ಥಿತರಿದ್ದರು. ಕೆ.ಎಸ್ ಪರಮೇಶ್ವರಪ್ಪ ದಾಗಿನಕಟ್ಟೆ ಸ್ವಾಗತಿಸಿದರು.

error: Content is protected !!