ಇಂದಿನ 21ನೇ ಶತಮಾನದಲ್ಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಕಾನೂನುಗಳು ಇದ್ದರೂ ಸಹ ಅವುಗಳ ಅರಿವಿನ ಕೊರತೆಯಿಂದ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದನೀಯ.
-ಎಲ್.ಹೆಚ್. ಅರುಣ್ ಕುಮಾರ್, ಹಿರಿಯ ನ್ಯಾಯವಾದಿ
ದಾವಣಗೆರೆ, ಫೆ.21 – ಮಕ್ಕಳಿಗೆ ಸಾಮರ್ಥ್ಯ ತರಬೇತಿಯನ್ನು ನೀಡುವುದು ಇಂದಿನ ಅವಶ್ಯಕವಾಗಿದೆ. ಮಕ್ಕಳಲ್ಲಿ ಜಾತಿ, ಧರ್ಮ, ವರ್ಗ ಹಾಗೂ ರಾಷ್ಟ್ರೀಯತೆಯ ಭೇದ ಭಾವಗಳನ್ನು ನಿರ್ಮೂಲನೆ ಮಾಡಿ ಅವರಲ್ಲಿ ಸಮಗ್ರ ನಾಯಕತ್ವದ ಗುಣಗಳನ್ನು ಬೆಳೆಸಬೇಕಾಗಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‍ಕುಮಾರ್ ಕರೆ ನೀಡಿದರು.
ಸ್ಥಳೀಯ ಆಕ್ಷನ್ ಇನಿಷಿಯೇಟಿವ್ ಫಾರ್ ಡೆವಲಪ್‍ಮೆಂಟ್ ಹಾಗೂ ಬೆಂಗಳೂರಿನ ಬಾಲ್ಯ ಟ್ರಸ್ಟ್ ಹಾಗೂ ಟಿಡಿಹೆಚ್-ಜಿ ಸಹಕಾರದೊಂದಿಗೆ ಭಾನುವಾರ ನಗರದ ಎಸ್‍ಪಿ ಆಫೀಸ್ ಮುಂಭಾಗ ಇರುವ ಅಡೋರಸ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳು ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳನ್ನು ಕಾನೂನಿನ ಅಡಿಯಲ್ಲಿ ಸಿದ್ದಪಡಿಸಲಾಗಿದೆ. ಆ ಮೂಲಕ ಮಕ್ಕಳನ್ನು ಸಮಾಜದ ಸ್ವಾಯತ್ತ ವ್ಯಕ್ತಿಗಳನ್ನಾಗಿ ರೂಪಿಸುವುದು. ಅಲ್ಲದೇ ಇತರರ ಮೇಲಿನ ಅವಲಂಬನೆಯಿಂದಾಗಿ ಮಕ್ಕಳ ಮೇಲೆ ನಡೆಯುವ ಹಾನಿಗಳಿಂದ ರಕ್ಷಣೆ ಪಡೆಯಲು ಮಕ್ಕಳ ಹಕ್ಕುಗಳನ್ನು ರಚಿಸಲಾಗಿದೆ. ಅವುಗಳನ್ನು ಸೂಕ್ತ ರೀತಿ ಜಾರಿಗೆ ತಂದು ಮಕ್ಕಳನ್ನು ಸಬಲೀಕರಣದತ್ತ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ನಾಯಕತ್ವ ತರಬೇತಿ ಶಿಬಿರ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿ, ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೇ ಅನ್ಯಾಯಗಳ ವಿರುದ್ದ ನ್ಯಾಯ ದೊರಕಿಸಿಕೊಳ್ಳಲು ಶಕ್ತರನ್ನಾಗಿ ಮಾಡಬೇಕಾಗಿದೆ. ಇದಲ್ಲದೇ ಹುಟ್ಟುವ ಮಕ್ಕಳು ವಿಶ್ವಮಾನವರಾಗಿದ್ದ ಅವರನ್ನು ವಿಶ್ವದ ಸಮಗ್ರ ನಾಯಕರನ್ನಾಗಿ ರೂಪಿಸಬೇಕಾಗಿದೆ ಎಂದು ಹೇಳಿದರು.
ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಬಾಬಣ್ಣ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾನ್‍ಬಾಸ್ಕೋದ ಸಂಪನ್ಮೂಲ ವ್ಯಕ್ತಿಗಳಾದ ಬಿ. ಮಂಜಪ್ಪ ಹಾಗೂ ಆರ್. ದುರುಗಪ್ಪ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಬಾಲ್ಯ ಟ್ರಸ್ಟ್‍ನ ಅನಂತ್ ಆಗಮಿಸಿದ್ದರು.