ಪಂಜಾಬ್ ಮಾದರಿ ಫಲಿತಾಂಶ ನಿರೀಕ್ಷೆ

ಪಂಜಾಬ್ ಮಾದರಿ ಫಲಿತಾಂಶ ನಿರೀಕ್ಷೆ

ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ

ದಾವಣಗೆರೆ, ಫೆ.16- ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಮಾದರಿ ಫಲಿತಾಂಶವನ್ನೇ ನಿರೀಕ್ಷಿಸುವುದಾಗಿ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.

ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಪಂಜಾಬ್ ಮಾದರಿ ಫಲಿತಾಂಶವನ್ನೇ ರಾಜ್ಯದಲ್ಲೂ ನಿರೀಕ್ಷಿಸುತ್ತಿದ್ದೇವೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಬಗ್ಗೆ ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಆಪ್ ಸ್ಪರ್ಧಿಸಲಿದೆ ಎಂದರು.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಮಾರ್ಚ್ ಮೊದಲ ವಾರದಲ್ಲಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬರಲಿದೆ ಎಂದರು.

ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಮಾ.4 ರಂದು ಮಧ್ಯಾಹ್ನ 12 ಗಂಟೆಗೆ ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸಲಿದ್ದಾರೆ. ದಾವಣಗೆರೆ ಸಮಾವೇಶದ ಮೂಲಕ ಪಕ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಆರಂಭಿಸಲಿದೆ. ಸಮಾವೇಶದಲ್ಲಿ 15000ಕ್ಕೂ ಅಧಿಕ ಆಪ್ ಕಾರ್ಯಕರ್ತರು, 20000ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಚಿತ್ ಸಹಾನಿ ತಿಳಿಸಿದರು.

ಜನಸಾಮಾನ್ಯರಿಗೆ ಕೈಗೆಟುಕುವಂತೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಈ ಎರಡೂ ಅಂಶಗಳನ್ನು ಮುಂದಿಟ್ಟುಕೊಂಡು ಮತದಾರರ ಎದುರು ಹೋಗಲಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಪಕ್ಷದ ಜಂಟಿ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ, ಕಾರ್ಯದರ್ಶಿ ಸಿ.ಆರ್. ಅರುಣ್‌ಕುಮಾರ್, ಆದಿಲ್ ಖಾನ್,  ವೈ.ಎನ್. ಮಲ್ಲಿನಾಥ್, ಗಣೇಶ್ ದುರ್ಗದ್, ಗೋವಿಂದರಾಜ್, ಇಂದೂಧರ್ ಕೂಲಂಬಿ, ಶ್ರೀಧರ ಪಾಟೀಲ್, ರಾಜಶೇಖರ್, ಕಂಚಿಕೆರೆ ಜಯಣ್ಣ, ಪ್ರೊ. ಧರ್ಮಾನಾಯಕ್ ಇತರರಿದ್ದರು.

error: Content is protected !!