ಮಲೇಬೆನ್ನೂರು, ಫೆ.10- ನಿಸ್ವಾರ್ಥ ಸಮಾಜ ಸೇವೆ ಮಾಡುವ ಮೂಲಕ ಮಾತ್ರ ದೇವರನ್ನು ನೋಡಲು ಸಾಧ್ಯ ಎಂದು ಕರ್ನಾಟಕ ಬ್ಯಾಂಕ್ ಎಂ.ಡಿ.ಎಂ.ಎಸ್. ಮಹಾಬಲೇಶ್ವರ ಹೇಳಿದರು.
ಕೊಮಾರನಹಳ್ಳಿ ರಂಗನಾಥಾಶ್ರಮದಲ್ಲಿ ಬ್ಯಾಂಕಿನ ಸಹಕಾರದಿಂದ ನಿರ್ಮಿಸಿದ ‘ಧಾರ್ಮಿಕ ಪ್ರವಚನ ಮಂದಿರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸದಿದ್ದರೆ ಜೀವನ ವ್ಯರ್ಥ ಹಾಗೂ ಸಾವಿಗೆ ಅವಮಾನ ಮಾಡಿದಂತೆ. ಜೀವ ಮಣ್ಣಿಗೆ ಸೇರುವ ಮುನ್ನ ಗುರುವಿನ ಮಾರ್ಗದರ್ಶನ ಪಡೆದು ಗುರಿ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಶಿವಮೊಗ್ಗ ವಲಯದ ಎ.ಜಿ.ಎಂ. ಹಯವದನ ಉಪಾಧ್ಯಾಯ ಮಾತನಾಡಿ ಬ್ಯಾಂಕ್, ಆರೋಗ್ಯ ಕ್ಷೇತ್ರ, ಶಾಲಾ ಕೊಠಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಆಂಬ್ಯುಲೆನ್ಸ್, ಕೆರೆಕಟ್ಟೆ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದೆ ಎಂದರು.
ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸ ಟ್ರಸ್ಟ್ ಅಧ್ಯಕ್ಷ ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಳಿ ಉಮಾಕಾಂತ್ ಜೋಯ್ಸ್, ಕುಮಾರ್ ಸ್ವಾಮಿ ಜೋಯ್ಸ್‌ಘೋಷ ಮಾಡಿದರು. ಡಿ.ಎಸ್. ಶೇಷಾದ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಗುರುರಾಜರಾವ್ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.