ಕೊಟ್ಟೂರು, ಜ.31- ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಪ್ರಯುಕ್ತ ಫೆ. 5ರಂದು ಸಿರಿಗೆರೆ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗದಂತೆ ಸ್ಥಗಿತಗೊಳಿಸಬೇಕೆಂದು ಕಟ್ಟೆಮನೆ ದೈವಸ್ಥರು ಹಾಗೂ ಸಮಸ್ತ ಭಕ್ತಾದಿಗಳು ಮಂಗಳವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಹಿರೇಮಠದ ಕ್ರಿಯಾಮೂರ್ತಿ ಶ್ರೀ ಪ್ರಕಾಶ ಸ್ವಾಮಿ ಕೊಟ್ಟೂರು ದೇವರು, ಇದೇ 16ರಂದು ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಕಳೆದ 26ರಂದು ಸ್ವಾಮಿಯ ರಥದ ತೇರು ಗಡ್ಡೆಯನ್ನು ಹೊರ ಹಾಕಿ, ಅಂದಿನಿಂದಲೇ ಸ್ವಾಮಿಯ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಿವೆ.
ಈ ಆಚರಣೆಯು ರಥೋತ್ಸವ ಮುಗಿಯುವವರೆಗೂ ಇರುತ್ತದೆ. ಈ ಅವಧಿಯಲ್ಲಿ ಸಂಪ್ರದಾಯದಂತೆ ಯಾವುದೇ ಧಾರ್ಮಿಕ ಉತ್ಸವ, ಮೆರವಣಿಗೆ, ಅಡ್ಡ ಪಲ್ಲಕ್ಕಿ ಉತ್ಸವಗಳು ನಡೆದು ಬಂದ ಪದ್ಧತಿ ಇಲ್ಲ. ತರಳಬಾಳು ಹುಣ್ಣಿಮೆಯಲ್ಲಿ ಕೊನೆಯ ದಿನ ಸಿರಿಗೆರೆ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಇರುತ್ತದೆ. ಇದಕ್ಕೆ ಕಟ್ಟೇಮನಿ ದೈವದವರ ಹಾಗೂ ಸಮಸ್ತ ಭಕ್ತಾದಿಗಳ ನಿರ್ಣಯದಂತೆ ಉತ್ಸವ ಸ್ಧಗಿತಗೊಳಿಸಬೇಕೆಂದರು.
ವಿಜಯನಗರ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರು, ಕೊಟ್ಟೂರು ತಹಶೀಲ್ದಾರ್, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಕೊಡಲಾಯಿತು.
ಮುಖಂಡರಾದ ಎಂ.ಎಂ.ಜೆ.ಸತ್ಯಪ್ರಕಾಶ್, ಆರ್.ಎಂ ಗುರುಸ್ವಾಮಿ, ಬೇಲಿ ಗೌಡ್ರು ಸೋಮಣ್ಣ, ವಕೀಲ ಹನುಮಂತಪ್ಪ, ಕೆಂಪಳ್ಳಿ ಗುರುಸಿದ್ದನಗೌಡ, ಕನ್ನಳ್ಳಿ ಮಂಜುನಾಥಗೌಡ, ಅಡಿಕೆ ಮಂಜುನಾಥಯ್ಯ, ಫಕೀರಪ್ಪ, ಉಮಾಪತಿ, ಗೋಣೆಪ್ಪ, ರೈತ ಸಂಘದ ಭರಮಣ್ಣ ಮುಂತಾದವರು ಮಾತನಾಡಿದರು