ಹರಪನಹಳ್ಳಿ : ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ, ಸೆ.25 – ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ, ಕರ್ನಾಟಕ  ರಾಜ್ಯ ರೈತ ಸಂಘ ಬಂದ್‍ಗೆ ಕರೆ ನೀಡಿದ್ದು, ತಾಲ್ಲೂಕಿನ ಪ್ರಗತಿಪರ ರೈತ ಸಂಘಟನೆಗಳು  ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ  ಇಳಿದ ಕೆಲ ರೈತರನ್ನು ಪೋಲಿಸರು ಬಂಧಿಸಿ ಬಿಡುಗಡೆಗೊಳಿಸಿದರು. 

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಹರಿಹರ ವೃತ್ತದವರೆಗೆ ಹೋಗಿ ರಸ್ತೆ  ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ಮುಂದುವರೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಜನ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿ ಕ್ಷೇತ್ರ ದೊಡ್ಡಮಟ್ಟದ ಬಿಕ್ಕಟ್ಟನ್ನು  ಎದುರಿಸಬೇಕಾಗುತ್ತದೆ.

ಭಾರತ ಕೃಷಿ ಪ್ರಧಾನ ದೇಶ. ಭಾರತ ದೇಶದ ಕೋಟ್ಯಂತರ ರೈತರು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಇಂತಹ ದೇಶದ ರೈತರ ಮೇಲೆ ಇಲ್ಲ ಸಲ್ಲದ ಕಾಯ್ದೆ, ಕಾನೂನು ತರಲು ಸರ್ಕಾರಗಳಿಗೆ ಯಾವ ನೈತಿಕತೆಯಿದೆ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಕರ್ನಾಟದಲ್ಲಿ ಭೂ ಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ  2020, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ , ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಗಳನ್ನು ಉಂಟು ಮಾಡಲಿದ್ದು, ರೈತರು ಸಂಕಷ್ಟದಲ್ಲಿ ಬದುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಂ.ಪಿ. ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ.ವೀಣಾ ಮಹಾಂತೇಶ್, ಹೊಸಳ್ಳಿ ಮಲ್ಲೇಶ್, ವಕೀಲ ಇದ್ಲಿ ರಾಮಪ್ಪ, ಕ.ರ.ವೆ. ತಾಲ್ಲೂಕು ಅಧ್ಯಕ್ಷ ಬಸವರಾಜ್ ಹುಲಿಯಪ್ಪನರ್ ನಾಗರಾಜ್, ಪ್ರಕಾಶ್ ನಾಯ್ಕ, ಹುಲಿಕಟ್ಟಿ ರಾಜಪ್ಪ, ಗುಡಿಹಳ್ಳಿ ಹಾಲೇಶ್, ಚಂದ್ರನಾಯ್ಕ, ದ್ಯಾಮಜ್ಜಿ ಹನುಮಂತಪ್ಪ, ಪರಶುರಾಮ್, ಮೈಲಪ್ಪ, ಹನುಮಂತಪ್ಪ, ಬಾಲಗಂಗಾಧರ್, ಅಭಿಷೇಕ್, ಕುದುರಿ ನಾಗರಾಜ್, ಮಹಾದೇವಪ್ಪ, ಜಿ. ಶಿವಕುಮಾರ್, ಶಬ್ಬೀರ್, ರಹಿಮಾನ್ ಮತ್ತು ಇತರರು ಇದ್ದರು.

error: Content is protected !!