ಈರುಳ್ಳಿ ಹಾನಿ ಪರಿಹಾರಕ್ಕೆ ಅಧಿವೇಶನದಲ್ಲಿ ಚರ್ಚಿಸುವೆ

ಶಾಸಕ ಜಿ.ಕರುಣಾಕರ ರೆಡ್ಡಿ

ಹರಪನಹಳ್ಳಿ, ಸೆ.7- ಈರುಳ್ಳಿ ಬೆಳೆ ಹಾನಿ ಪರಿಹಾರ ನೀಡುವಂತೆ ಬರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಮುಖ್ಯ ಮಂತ್ರಿಯವರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ  ಹೇಳಿದರು.

ತಾಲ್ಲೂಕಿನ ಚಿಗಟೇರಿ, ಮತ್ತಿಹಳ್ಳಿ  ಗ್ರಾಮಗಳ ರೋಗ ಪೀಡಿತ ಈರುಳ್ಳಿ ಜಮೀನುಗಳಿಗೆ ಭೇಟಿ ನೀಡಿದ ನಂತರ  ಸುದ್ದಿಗಾರರಿಗೆ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಗೆ ವಾತಾವರಣ ಬದಲಾಗಿ 4 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ ಸಂಭವಿಸಿದೆ. ಸೆ.21 ಕ್ಕೆ ವಿಧಾನ ಸಭಾ ಅಧಿವೇಶನ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ  ನಷ್ಟ ಸಂಭವಿಸಿದ ಈರುಳ್ಳಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ನಾನು ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದರು. 

ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿದ ವರ್ಗಗಳ ಜನರಿಗೆ ಲಾಕ್‌ಡೌನ್ ಸಂದರ್ಭದಲ್ಲಿ 5 ಸಾವಿರ ರು.ಗಳ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿ ಈವರೆಗೂ ಸಿಕ್ಕಿಲ್ಲವೋ ಅಂತವರಿಗೆ  ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತೇನೆ. ಕೊರೊನಾ ಬಂದ ನಂತರ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಕೆಲಸ, ಕಾರ್ಯಗಳು ಸ್ಥಗಿತಗೊಂಡಿದ್ದವು.ಆದರೆ ಈಚೆಗೆ ರಸ್ತೆ ಕಾಮಗಾರಿ, ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಹಣ ಬರುವುದು ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ ಎಂದು ಅವರು ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ಇರುವ 20 ಕೋವಿಡ್ ಹಾಸಿಗೆಗಳನ್ನು 50ಕ್ಕೆ ಹೆಚ್ಚಿಸುವ ಕುರಿತು ಜಿಲ್ಲಾಧಿಕಾರಿ ಬಳಿ ಮಾತನಾಡುವೆ. ಈಗಾಗಲೇ ಹೆಚ್ಚುವರಿಯಾಗಿ 2 ವೆಂಟಿಲೇಟರ್‌ಗಳನ್ನು ಒದಗಿಸಲಾಗಿದ್ದು, ಕೊರೊನಾ ಸಮರ್ಪಕ ಚಿಕಿತ್ಸೆಗೆ ಏನು ಬೇಕೋ ಅದೆಲ್ಲಾ ವ್ಯವಸ್ಥೆ ಮಾಡಿಸಲಾಗುವುದು ಎಂದರು. 

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ ಅವರು ಶಾಸಕರಿಗೆ ಬೆಳೆ ಹಾನಿ ಕುರಿತು ಮಾಹಿತಿ ನೀಡಿದರು.

ಬೆಣ್ಣಿಹಳ್ಳಿ ಆರ್. ಕರೇಗೌಡ, ಯು.ಪಿ.ನಾಗರಾಜ್, ಎಂ.ಸಂತೋಷ್, ಸಿಪಿಐ ಕುಮಾರ್ ಸೇರಿದಂತೆ ಇತರರು ಇದ್ದರು.

error: Content is protected !!