ಜಗಳೂರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಸೂಕ್ತ ಪ್ರದೇಶ

ಜಗಳೂರು, ಸೆ.1- ಬರಪೀಡಿತ ಜಗಳೂರು ತಾಲ್ಲೂಕಿನ ರೈತರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯನ್ನು ಆಶ್ರಯಿಸಿದರೆ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ತಾಲ್ಲೂಕಿನ ಮಲೆ ಮಾಚಿಕೆರೆ  ಗ್ರಾಮದ ರೈತ ರಾಜಪ್ಪ ಎಂಬುವವರು ತಮ್ಮ ಜಮೀನಿನಲ್ಲಿ 1ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಡ್ರ್ಯಾಗನ್ ಫ್ರೂಟ್ಸ್ ವೀಕ್ಷಿಸಿದ ಅವರು, ಬೆಳೆ ಬೆಳೆಯುವ ವಿಧಾನದ ಬಗ್ಗೆ ರೈತರಿಗೆ ಸಮರ್ಪಕ  ಮಾಹಿತಿ ನೀಡಿದರು.

ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಬೇಸಾಯ ಪದ್ಧತಿ ಇದಾಗಿದ್ದು,  ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಒಂದು ಹೆಕ್ಟೇರ್‌ಗೆ 70 ರಿಂದ 80 ಸಾವಿರ ಖರ್ಚು ಬರಲಿದೆ. ಪ್ರತಿ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ  150-160 ರೂಪಾಯಿಗಳಷ್ಟಿದೆ ಎಂದರು.

ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಆಸಕ್ತ ರೈತರು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೀರಾವರಿ ಸೌಲಭ್ಯ ಉಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿದವ ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಅವಕಾಶವಿದೆ. ಮಾಹಿತಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಕರೆ ನೀಡಿದರು.

error: Content is protected !!