ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

ಹರಪನಹಳ್ಳಿ, ಸೆ.1- ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಗಳನ್ನು ಕೈಬಿಡುವಂತೆ ಒತ್ತಾಯಿಸಿ ತಾಲ್ಲೂಕು ಅಖಿಲ ಭಾರತ ಯುವಜನ ಫೆಡರೇಷನ್‍ನ (ಎಐವೈಎಫ್) ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ  ಮನವಿ ಸಲ್ಲಿಸಿದರು. 

ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮುಜೀಬ್‌ ರಹಿಮಾನ್ ಮಾತನಾಡಿ ದೇಶವು, ಕೊರೊನಾ ಸಂಕಷ್ಟದಲ್ಲಿ ಸಿಲುಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಎಲ್ಲ ವರ್ಗಗಳ ಜನರ ಹಿತಕ್ಕಾಗಿ ಕಾರ್ಯ ಪ್ರವೃತ್ತರಾಗಿರಬೇಕಿತ್ತು. ಆದರೆ ಜನರು ಸಂಕಷ್ಟದಲ್ಲಿ ಸಿಲುಕಿದ್ದರೂ ಸೂಕ್ತ ಪರಿಹಾರೋಪಾಯಗಳನ್ನು ಕೈಗೊಂಡಿರುವು ದಿಲ್ಲ. ಬದುಕಿನ ನಿರ್ವಹಣೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಪತ್ತು ಕಾಲದಲ್ಲಿ ಸರ್ಕಾರಗಳು ಜನರ ಸಂಕಷ್ಟವನ್ನು ಪರಿಹರಿಸುವುದನ್ನು ಬಿಟ್ಟು ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲು ಮುಂದಾಗಿದ್ದಾರೆ. ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಖಂಡಿಸುತ್ತದೆ ಎಂದರು.

ಎ.ಐ.ಯು.ಟಿ.ಸಿ. ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ  ಪಟ್ಟಣದಿಂದ ಗ್ರಾಮೀಣ ಭಾಗಕ್ಕೆ ಬಂದಂತಹ ವಲಸೆ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಅವರ ಜೀವನ  ಭದ್ರತೆಯನ್ನು ಒದಗಿಸಬೇಕು. ಹಾಗೇ  ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳವರೆಗೆ ವಿಸ್ತರಿಸಬೇಕು. ಸಣ್ಣ ಸಣ್ಣ ನಗರ ಪ್ರದೇಶಗಳಲ್ಲಿರುವ ಯುವಕರಿಗೆ ನಿರುದ್ಯೋಗ ಭತ್ಯೆಯನ್ನು ಒದಗಿಸಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಆಗ್ರಹಿಸುತ್ತದೆ ಎಂದರು.

ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಸ್. ಸುರೇಶ್, ತಾಲ್ಲೂಕು ಮುಖಂಡರಾದ ಬಿ.ಸಿದ್ದೇಶ್, ಕಾಶಿನಾಥ ನಾಯ್ಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!