ದಾವಣಗೆರೆ, ಆ.31- ಕೋವಿಡ್ ಸೋಂಕಿಗೆ ಬಲಿಯಾದ ಚನ್ನಗಿರಿ ತಾಲ್ಲೂಕು ಮಲ್ಲಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಗರಿಷ್ಠ ಸೌಲಭ್ಯವನ್ನು ತ್ವರಿತವಾಗಿ ದೊರಕಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ದಾವಣಗೆರೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿ ಕಾರಿಗೆ ಪಿಡಿಓಗಳು ಮನವಿ ಸಲ್ಲಿಸಿದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕಾಗಿ ತಮ್ಮ ವೈಯಕ್ತಿಕ ಜೀವ ಮತ್ತು ಜೀವನವನ್ನು ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾಕಷ್ಟು ಮಾನಸಿಕ ಒತ್ತಡ ಹಾಗೂ ಇತರೆ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೀಗೆ ಕರ್ತವ್ಯ ನಿರ್ವಹಣೆಯಲ್ಲಿದ್ದಾಗಲೇ ಮಲ್ಲಾಪುರ ಗ್ರಾಪಂ ಪಿಡಿಒ ಶೇಖರಪ್ಪ ಅವರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಅವರ ಅಗಲಿಕೆಯಿಂದಾಗಿ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ದೊರೆಯುವ ಗರಿಷ್ಠ ಸೌಲಭ್ಯವನ್ನು ಅವರಿಗೆ ಶೀಘ್ರವಾಗಿ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರತ ಪಿಡಿಒ ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ರಜೆ ಕೋರಿದಾಗ ಪರಿಸ್ಥಿತಿಯ ಗಂ ಭೀರತೆ ಅರಿತುಕೊಂಡು ತಿರಸ್ಕರಿಸದೇ ರಜೆ ನೀಡ ಬೇಕು, ಕೊರೊನಾ ಸೋಂಕಿನ ಕಠಿಣ ಪರಿಸ್ಥಿತಿಯ ಲ್ಲಿಯೂ ಇತರೆ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ಗುರಿ ನೀಡಿ ಮತ್ತಷ್ಟು ಮಾನಸಿಕ ಒತ್ತಡ ನೀಡುವು ದನ್ನು ನಿಲ್ಲಿಸಬೇಕು, ಹಲವಾರು ಯೋಜನೆಗಳಿಗೆ ವಾರದಲ್ಲಿ ಒಂದು ಎರಡರಂತೆ ವಿಡಿಯೋ ಸಂವಾದ ಏರ್ಪಡಿಸಿದಾಗ ಪಿಡಿಒಗಳ ಕೊಂದುಕೊರತೆಗಳನ್ನು ಆಲಿಸಲು ತಿಂಗಳಿಗೆ ಒಮ್ಮೆಯಾದರೂ ಸಂವಾದ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.