ದಾವಣಗೆರೆ, ಆ.17- ಜಮಾಯಿತ್ ಈ ಉಲ್ಮಾ ವತಿಯಿಂದ ಸುಮಾರು 30 ಆಮ್ಲಜನಕ ಸಿಲಿಂಡರ್ ಗಳನ್ನು ಉಚಿತವಾಗಿ ಅಗತ್ಯವಿರುವ ಕೋವಿಡ್ ರೋಗಿಗಳ ಸೇವೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ನಗರದಲ್ಲಿ ಇಂದು ವಿತರಿಸಲಾಯಿತು.
ಚೌಕಿಪೇಟೆಯ ಹೊಸ ಮಸೀದಿ ಬಳಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಆಮ್ಲಜನಕ ಸಿಲಿಂಡರ್ ಗಳ ಸೇವೆಗೆ ಚಾಲನೆ ನೀಡಿದರು. ಕೊರೊನಾದಿಂದ ಗುಣಮುಖರಾದ ಮೇಲೆ ಹನುಮಂತರಾಯ ಅವರು ಭಾಗವಹಿಸಿದ ಮೊದಲ ಕಾರ್ಯಕ್ರಮವಿದಾಗಿದೆ.
ಈ ವೇಳೆ ಮಾತನಾಡಿದ ಅವರು, ಉಸಿರಾಟದ ತೊಂದರೆಯುಳ್ಳ ಕೊರೊನಾ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಇದ್ದು, ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಮ್ಲಜನಕದ ಕೊರತೆಯೂ ಸಹಜವಾಗಿದೆ. ಇದನ್ನು ನೀಗಿಸಲು ಜಿಲ್ಲಾಡಳಿತವೂ ಸಹ ಶ್ರಮ ವಹಿಸಿದೆ. ಅವಶ್ಯವುಳ್ಳ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಮ್ಲಜನಕ ಸಿಲಿಂಡರ್ ಗಳನ್ನು ಸಂಘ-ಸಂಸ್ಥೆಗಳಿಂದ ವಿತರಣೆ ಮಾಡುತ್ತಿರುವುದು ನಗರದಲ್ಲಿ ಪ್ರಪ್ರಥಮವಾಗಿದ್ದು, ಜಮಾಯಿತ್ ಈ ಉಲ್ಮಾ ಈ ಕಾರ್ಯ ಶ್ಲಾಘನೀಯವಾಗಿದ್ದು, ಇದು ಜಿಲ್ಲಾಡಳಿತಕ್ಕೆ ಕೈ ಜೋಡಿಸಿದಂತಾಗಿದೆ. ಹೀಗೆ ಎಲ್ಲರೂ ಸೇವೆಗೆ ಮುಂದಾದರೆ ಜೀವಗಳ ಉಳಿಸುವಿಕೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಎರಡು ಮೂರು ತಿಂಗಳಲ್ಲಿ ಕೊರೊನಾಗೆ ಔಷಧಿ ಬಿಡುಗಡೆಯಾಗಲಿದ್ದು, ಅಲ್ಲಿವರೆಗೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತೆಯಿಂದ ಇರಬೇಕು. ಕೊರೊನಾ ಬಗ್ಗೆ ಭಯ ಬೇಡವೆಂದು ಜನರಿಗೆ ಧೈರ್ಯ ತುಂಬಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಕೊರೊನಾ ಬಗ್ಗೆ ಆತಂಕ ಬೇಡ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು. ಡಾ. ಬಿ.ಪಿ. ರಾಜೇಶ್, ಡಾ. ಜಮೀರ್ ಅವರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಯಿತ್ ಈ ಉಲ್ಮಾ ಜಿಲ್ಲಾಧ್ಯಕ್ಷ ಮೌಲಾನ ಸಮೀವುಲ್ಲಾ, ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಸೇರಿದಂತೆ ಇತರರು ಇದ್ದರು.