ಮಾಧ್ಯಮ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವೀಂದ್ರ ರೇಷ್ಮೆ
ದಾವಣಗೆರೆ, ಡಿ. 27- ಕುವೆಂಪು ಅವರ ಮಾತಿನಂತೆ ಪತ್ರಕರ್ತರು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು ಎಂದು ಹಿರಿಯ ಪತ್ರಕರ್ತರೂ, ರಾಜಕೀಯ ವಿಶ್ಲೇಷಕರೂ ಆದ ರವೀಂದ್ರ ರೇಷ್ಮೆ ಸಲಹೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಓರ್ವ ಅಧಿಕಾರಿ, ರಾಜಕಾರಣಿ ಮಾಜಿಯಾಗ ಬಹುದು, ಆದರೆ ಪತ್ರಕರ್ತ ಮಾಜಿ ಯಾಗಲು ಸಾಧ್ಯವಿಲ್ಲ. ಅವನ ಸಾಧನೆಗೆ ಕೊನೆ ಇಲ್ಲ. ಪತ್ರಕರ್ತನಲ್ಲಿನ ತುಡಿತವನ್ನು ದಮನ ಮಾಡಲು ಯಾರಿಂದಲೂ ಸಾಧ್ಯವಾಗದು ಎಂದರು.
ಭೂ ರಹಿತ ಕೃಷಿ ಕಾರ್ಮಿಕನಿಗೂ ಪೂರ್ಣಾ ವಧಿ ಪರ್ತಕರ್ತನಿಗೂ ವ್ಯತ್ಯಾಸವಿಲ್ಲ. ಅನಿಶ್ಚಿತತೆ, ಅಭದ್ರತೆ, ಅಸ್ಥಿರತೆ ಪತ್ರಕರ್ತನಲ್ಲೂ ಕಾಡುತ್ತವೆ. ಆದರೆ ಕಷ್ಟ ಅನುಭವಿಸಿದಾಗಲೇ ಉತ್ತಮ ಬರವಣಿಗೆ ಹೊರ ಬರಲು ಸಾಧ್ಯ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಹಿಂದಿನ ದಿನಗಳಲ್ಲಿ ಪತ್ರಿಕೆ ಮುದ್ರಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಮುಂದುವರಿದ ತಂತ್ರಜ್ಞಾನ ಬಳಕೆ ಪರಿಣಾಮ ಇಂದು ಮುದ್ರಣ ಸುಲಭವಾಗಿದೆ ಎಂದರು.
ಇಂದು ಪತ್ರಿಕೆಗಳು ಯಾರನ್ನಾದರೂ ಹೊಗಳಬಹುದು ಅಥವಾ ತೆಗಳಬಹುದು. ಆದರೆ ಪತ್ರಕರ್ತರು ಹಣದಾಸೆಗೆ ಒಳಗಾಗಬಾರದು ಎಂದು ಅವರು ಕಿವಿ ಮಾತು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪತ್ರಕರ್ತರು ನೈಜ ವಿಷಯಗಳಿಗೆ ಒತ್ತು ಕೊಡಬೇಕು. ಅನಗತ್ಯ ಹೇಳಿಕೆಗಳನ್ನು ಪರಿಶೀಲಿಸಿ ವರದಿ ಮಾಡಬೇಕೆಂದು ಸಲಹೆ ನೀಡಿದರು.
ಪತ್ರಕರ್ತರಿಲ್ಲದಿದ್ದರೆ ರಾಜಕಾರಣಿಗಳು ಬಾವಿ ಒಳಗಿನ ಕಪ್ಪೆಯಂತಾಗುತ್ತಾರೆ. ಅವರು ಮಾಡಿದ ಕೆಲಸಗಳು ಜನತೆಗೆ ತಿಳಿಯುವುದಿಲ್ಲ. ಹೀಗಾಗಿ ಮಾಡಿದ ಕೆಲಸಗಳ ಪ್ರಚಾರಕ್ಕೆ ಪತ್ರಕರ್ತರು ಮುಖ್ಯ ಎಂದ ಅವರು, ದೂಡಾದಿಂದ ವರದಿಗಾರರ ಕೂಟಕ್ಕೆ ನಿವೇಶನ ಕೊಡಿಸುವ ಭರವಸೆಯನ್ನು ನೀಡಿದರು.
ಇದೇ ವೇಳೆ ವಿಜಯ ಕರ್ನಾಟಕ ಪ್ರಧಾನ ವರದಿಗಾರ ಯಳನಾಡು ಮಂಜುನಾಥ, ಸಂಯುಕ್ತ ಕರ್ನಾಟಕ ಉಪ ಸಂಪಾದಕ ಡಿ.ರಂಗನಾಥರಾವ್, ನ್ಯೂಸ್ 18 ವರದಿಗಾರ ಹೆಚ್.ಎಂ.ಪಿ. ಕುಮಾರ್, ದಾವಣಗೆರೆ ಟೈಮ್ಸ್ ಸಂಪಾದಕ ಜಿ.ಎಸ್. ವೀರೇಶ್, ಬಿ.ಟಿವಿ ಕ್ಯಾಮರಾ ಮ್ಯಾನ್ ಪಿ.ಎಸ್. ಲೋಕೇಶ್ ಇವರುಗಳಿಗೆ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿ ಸದಸ್ಯ ನಾಗರಾಜ್ ಎಸ್. ಬಡದಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ.ಏಕಾಂತಪ್ಪ, ನಿಕಟಪೂರ್ವ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಖಜಾಂಚಿ ನಂದಕುಮಾರ್ ಎಂ.ಕೆ. ಉಪಸ್ಥಿತರಿ ದ್ದರು. ಸಲಹಾ ಸಮಿತಿ ಸದಸ್ಯ ತಾರಾನಾಥ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ದೇವಿಕಾ ಸುನೀಲ್ ನಿರೂಪಿಸಿದರು. ಕಾರ್ಯದರ್ಶಿ ಪಿ.ಮಂಜುನಾಥ ಕಾಡಜ್ಜಿ ವಂದಿಸಿದರು.